Archive for ಡಿಸೆಂಬರ್, 2008


ಕೊಟ್ಟ್ ಮಾತ್ ತಪ್ಸುದಿಲ್ಲ, ವಾರಕ್ಕೊಂದ್ಸರ್ತಿ ಆರೂ ಈ ಬದಿಗೆ ಬತ್ತೆ ಅಂದೇಳಿ ಕಳ್ಸರ್ತಿ ಹೇಳಿದ್ನಲ್ದಾ… ಹಾಂಗೇ ಇವತ್ ಬಂದಿದೆ ಕಾಣಿ… ಹಾಂಗೇ ನೀವೆಲ್ಲ ಉತ್ರ ಕೊಟ್ಟದ್ ಕಂಡ್ ಮಸ್ತ್ ಖುಷಿ ಆಯ್ತ್ (ಬೆಂಗ್ಳೂರ್ ಬದಿ ಮಸ್ತ್ ಅಲ್ಲ ಕುಂದಾಪ್ರ ಬದಿ ಮಸ್ತ್… J )

 

ಅನುಪಮ, ಮಹೇಶ್, ವೀಮಾ ಶೆಟ್ಟಿ, ಅಡಿಗ, ಶಿಶಿರ, ರಂಜಿತ್, ದೀಪಾ, ಭಾಗ್ವತ್ರ್… ಇವ್ರೆಲ್ಲಾ ಉತ್ರ ಕೊಟ್ಟಿರ್. ಶಿಶಿರ, ರಂಜಿತ್ ಎರ್ಡ್ ಸಮ್ನಾದ್ ಉದಾಹರಣೆ ಸೈತ ಕೊಟ್ಟಿರ್. ಅದೇ ಅರ್ಥ ಬಪ್ಪ್ ಬೇರೆ ಶಬ್ದ ಹೇಳದ್ದಕ್ಕೆ ಭಾಗ್ವತ್ರಿಗೆ, ಶಿಶಿರ್‌ಗೆ ಒಂದ್ ಥ್ಯಾಂಕ್ಸ್.

 

ಈಗ ಸರಿ ಉತ್ರ ಕಾಂಬ

1. ತೊಡಮಿ/ತೊಡಮೆ = ದನ-ಕರುಗಳು ಒಳಗೆ ಅಡ್ಡ ಬರದಂತೆ ಬೇಲಿಗೆ ಅಳವಡಿಸುವ ಬಿದಿರು ಅಥವಾ ಬೊಂಬಿನ ಚೌಕಟ್ಟು (ನಂಬದಿಲ್ಲ್ ಅಡ್ಕಿ ದಬ್ಬೆದು ಮಾಡ್ತ್ರ್ ಕೆಲವ್ ಸರ್ತಿ)

ಬಳಕೆ:

          ನೀ ಆಡುಕ್ ಹೋಪುದಾರೆ ಅಡ್ಡಿಲ್ಲ. ತೊಡ್ಮಿ ಹಾಕಿ ಹೋಗ್. ಇಲ್ದಿರೆ ಗಂಟಿ ಪೂರಾ ಒಳ್ಗ್ ಬತ್ತೊ

 

2. ಮಿಟ್ಟಿ = ಮೊಗ್ಗು

ಬಳಕೆ:

          ಹೂ ಕೊಯ್ಕಂಡ್ ಬಾ ಅಂದ್ರೆ ಮಿಟ್ಟಿ ಪೂರಾ ಚಿಪ್ಪಡ್‌ಸ್ಕಂಡ್ ಬಂದಿದ್ಯಲಾ ಮರಾಯ

          ಮಸ್ತ್ ಮಲ್ಗಿ ಮಿಟ್ಟಿ ಬಿಟ್ಟಿತ್, ಕೊಯ್ದಿರ್ ಕಟ್ಟಿ ನಾಳೆ ದೇವಸ್ಥಾನಕ್ಕಾರೂ ತಕಂಡ್ ಹೋಯ್ಲಕ್ಕಿತ್ತ್

 

3. ಗಿರ = ಗೀಳು, ಹಂಬಲ, ಚಟ

ಬಳಕೆ:

          ಒಂದ್ ಗಳ್ಗಿ ಪುಸ್ತ್‌ಕ ಹಿಡ್ಕಂಡ್ ಓದಂದ್ರೆ… ಒಡಿಯಾಯ್ತ್.. ಅವ್ನಿಗೆ ಆಟದ್ದೊಂದೇ ಗಿರ.

          ಅವ್ಳ್ ಹತ್ರ ಒಂದ್ ಕೆಲ್ಸ ಮಾಡ್ಸ್‌ಕಂಬ್ಕೆ ಆತಿಲ್ಲ. ದಿನೀಡಿ ಕತಿ ಪುಸ್ತ್‌ಕ ಓದುದೇ ಆಯ್ತ್. ಅದ್ಯಾವ್ನಮನಿ ಗಿರವೋ

          ಅವ್ನಿಗೆ ಕೈಯ್ಯಗೆ ನಾಕ್ ಪಾವಾಣಿ ಆರ್ ಮೇಲೆ ಯಾವ್ದೂ, ಯಾರೂ ಬೇಕಿಲ್ಲ. ದುಡ್ಡಿನ್ ಗಿರ ಅಲ್ದೇ ಮತ್ತೆಂತ

 

ಈ ಸರ್ತಿ ಮತ್ತೆರ್ಡ್ ಒಳ್ಳೇ ಶಬ್ದ ಹುಡ್ಕಂಡ್ ಬಂದಿದೆ ಕಾಣಿ…. ಉತ್ರ ನಿಮ್ಗ್ ಹ್ಯಾಂಗೂ ಗೊತ್ತಿರತ್ತ್. ಅದನ್ ವಾಕ್ಯ ಮಾಡಿ ನೀವೆಲ್ಲ ಹೇಳ್ರೆ ಓದುಕೆ ಭಾರೀ ಗಮ್ಮತ್ತಿರತ್ತ್…ಹೇಳ್ತ್ರಿ ಅಲ್ದಾ…?

  1. ಚಾ ಕಣ್ಣ್  (ಇದಕ್ಕೆ ಕಣ್ಣ್ ಅಂದೇಳಿ ಎಂತಕಂತ್ರ್ ಅಂದೇಳಿ ನಂಗೊತ್ತಿಲ್ಲ. ಯಾರಿಗಾರೂ ಗೊತ್ತಿದ್ರೆ ಹೇಳಿ)
  2. ಕುಂಚಟ್ ಹಾರು

ಕಳ್ದ್ ಸರ್ತಿ ಒಂದಿಷ್ಟ್ ಕುಂದಾಪ್ರ ಕನ್ನಡ ಶಬ್ದ ಕೊಟ್ಟ್ ನಿವೆಲ್ಲ ಉತ್ರ ಹೇಳಿನಿ ಕಾಂಬ ಅಂತ್ ಹೇಳಿದೆ…

ನಾವಡ್ರ್, ಯಶೋಧ ಮತ್ತೆ ಅನುಪಮ ಸುಮಾರ್ ಸರಿ ಉತ್ರ ಕೊಟ್ಟಿರ್. ಬೇರೆ ಯಾರೂ ಈ ಬದಿಗ್ ನೀಕಿ ಕಾಣಲ್ಯೋ…, ಕಂಡ್ರೂ ಉತ್ರ ಹೇಳುಕೆ ಮನ್ಸಿಲ್ಯೋ, ಅತ್ವ ಯಾರ್ ಹೇಳ್ತ್ರ್.. ಇವ್ನಿಗೆ ಬೇರೆ ಕೆಲ್ಸ ಇಲ್ಲ ಅಂದೇಳಿ ಸುಮ್ನಾಯ್ಕಂಡ್ರೋ ಗೊತ್ತಿಲ್ಲ. ಹೋಯ್ಲಿ ಬಿಡಿ… ನಂಗೇನ್ ಬೇಜಾರಿಲ್ಲ… ಯಾರಿಗಾರೂ ಒತ್ತಾಯ ಮಾಡಿ ಉತ್ರ ಹೇಳಿ ಅಂದೇಳಿ ಹೇಳುಕಾತ್ತಾ?

 

ಆರ್ ಹೀಂಗ್ ನಿಮ್ಮತ್ರ ಉತ್ರ ಕೇಂಬುದರ್ ಉದ್ಧೇಶ ಎಂತ ಅಂದ್ರೆ… ಒಂದ್ ಶಬ್ದಕ್ಕೆ ನಮ್ಗೆ ಗೊತ್ತಿಲ್ದಿದ್ದ್ ಕೆಲವ್ ಅರ್ಥ ಇದ್ರೆ ಅದನ್ನು ಒಂಚೂರ್ ತಿಳ್ಕಂಬ ಅಂದೇಳಿ

ಇರ್ಲಿ… ಈಗ ಉತ್ರ ಎಂತ ಕಾಂಬ ಅಕಾ…

 

1. ಗತಿ ಗೋತ್ರ ಇಲ್ದಿದಂಗ್ ಆಪುದ್ = ಯಾರೂ ದಿಕ್ಕಿಲ್ಲದಂತಾಗುವುದು, ಅನಾಥರಾಗುವುದು, ಎಲ್ಲ ಕಳೆದುಹೋಗಿ ಅಸಹಾಯಕರಾಗು                       

2. ಅಂಡುದ್ = ಹಿಂಜರಿಕೆಯಿಂದ ಅಡಗಿಕೊಳ್ಳು, ಹಿಂದೇಟು ಹಾಕು, ಸಂಕೋಚದಿಂದ ಮರೆಯಲ್ಲಿ ಕುಳಿತು ಇಣುಕಿ ನೋಡು

3. ಹೊತ್ತ್ಹೋಪತಿಗೆ = ಸಂಜೆಯ ವೇಳೆಯಲ್ಲಿ, ಸಾಯಂಕಾಲದ ಹೊತ್ತಿನಲ್ಲಿ , ಹೊತ್ತು ಮುಳುಗುವ ಹೊತ್ತಿನಲ್ಲಿ

4. ವರ್ಕುದ್ = ಕುಳಿತಲ್ಲಿಯೇ ತೆವಳುತ್ತಾ ಚಲಿಸುವುದು

(ಅನುಪಮ ಹೆಚ್ಚು ಕಮ್ಮಿ ಎಲ್ಲಾ ಸರಿ ಉತ್ರ ಹೇಳಿರ್, ನಾವಡ್ರ್ 1,3 ಸರಿ ಉತ್ರ ಹೇಳಿರ್, ಯಶೋಧ 1,2,3 ಕ್ಕೆ ಸರಿ ಉತ್ರ ಹೇಳಿರ್)

 

ಈ ಸರ್ತಿ ಬರಿ ಮೂರೇ ಮೂರ್ ಶಬ್ದಕ್ಕೆ ಉತ್ರ ಕೊಡಿ ಸಾಕ್.

 

1. ತೊಡಮಿ/ತೊಡಮೆ

2. ಮಿಟ್ಟಿ

3. ಗಿರ


ಈ ಬ್ಲಾಗ್ ಬದಿಗೆ ಮಂಡಿ ಹಾಕಿ ಮನ್ಕಣ್ದೆ ಸುಮಾರ್ ದಿನ ಆಯ್ತ್. ಹಾಂಗಂದೇಳಿ ಬರುಕ್ ಪುರ್ಸೊತ್ ಇಲ್ಲ, ಬರುಕ್ ಮನ್ಸಿಲ್ಲ ಅಂದೇಳಿ ಅಲ್ಲ. ಹಾಂಗ್ ಕೇಂಡ್ರೆ ಈ ಬ್ಲಾಗಿಗೆ ಬರುಕೆ ನಂಗೂ ಮಸ್ತ್ ಖುಷಿಯೇ. ಆರೂ ಕಳ್ದ್ ತಿಂಗ್ಳ್ ಇಡೀ ಏನೋ ಒಂದ್ನಮನಿ ಉದಾಶಿನ ಹಿಡ್ದಂಗ್ ಆಯಿತ್. ಈಗ ಅದ್ನೆಲ್ಲ ಕೊಡ್ಕಿ ಹಾಕಿ ಬರುಕ್ ಕೂಕಂಡಿದೆ. ಇನ್ನ್ ಮೇಲೆ ಹೀಂಗೆಲ್ಲ ಹಾಂಟ್ ಹಾಕುದಿಲ್ಲ ಅಕಾ… ಸುಳ್ಳಾ-ಬದ್ಧವಾ ನೀವೇ ಕಾಣಿ ಬೇಕಾರೆ. ಈ ಬದಿಗೆಲ್ಲಾರೂ ನೀವ್ ನೀಕಿ ಕಂಡದ್ದೇ ಹೌದಾರೆ ಒಂದ್ ನಾಕ್ ಮಾತ್ ಹೇಳಿ ಮಾರಾಯ್ರೆ… ಇದ್ ಸಾಪಿತ್ತ್, ಇಲ್ಲಾ ಇದ ಚೂರೂ ಲಾಯ್ಕಿರಲ್ಲ, ಹೀಂಗ್ ಹೀಂಗ್ ಬರ್ದ್ರೆ ಒಳ್ಳೆದಿರತ್ತ್… ಅಂದೇಳಿ ಏನಾರೂ ಹೇಳ್ರೆ ನಂಗೂ ಬರುಕ್ ಒಂದ್ ಉಮೇದ್ ಬತ್ತ್. ಹೇಳ್ತ್ರಿ ಅಲ್ದಾ?
Cashew_-_sprout

cashew-sprout (3)

cashew-sprouts-250x250

ನೀವ್ ಏನೇ ಹೇಳಿ ಬೇಕಾರೆ.. ನಾವ ಸಣ್ಣಕಿಪ್ಪ ಸುರಿಗಿದ್ದ ದಿನದ್ ನೆನ್ಪಿನ ಚಂದ ಬೇರೆ ಯಾವ್ದಕ್ ಸತೇ ಬತ್ತಿಲ್ಲ. ಡಿಸೆಂಬರ್-ಜನವರಿ ಸುರಿಗೆ ಹಗೂರ ಹೂ ಬಿಡುಕೆ ಸುರುವಾಪ ಗ್ವಾಯ್ ಮರದಗೆ ಫೆಬ್ರವರಿ ಬಪ್ಪತಿಗೆ ಒಂದೊಂದೇ ಮಿಜ್ರ್ ಬಿಡುಕ್ ಶುರುವಾತ್. ಕೈಯೆಲ್ಲ ಸೊನಿಯಾತ್ ಬ್ಯಾಡ ಅಂದ್ರೂ ಕೇಣ್ದೆ ಮಿಜ್ರ್ ಎಲ್ಲಾ ಕೊಯ್ಕಂಡ್ ಬಂದ್, ಕತ್ತಿಯೋ, ಬ್ಲೇಡೋ ಹಿಡ್ಕಂಡ್ ಮಿಜ್ರನ್ನ ಬಗ್ತಿ ಮಾಡಿ, ಅದ್ರ್ ಒಳ್ಗಿನ ಬೆಳಿ ಬೆಳಿ ಚಿರ್ಲ್(ತಿರುಳು) ತಿಂಬುದನ್ನ್ ಎಣ್ಸಕಂಡ್ರೆ ಬಾಯಗೆ ನೀರ್ ಒಡುಕೆ ಶುರುವಾತ್ತ್. ಹೆಸ್ರ್‌ಬ್ಯಾಳಿ ಪಾಯ್ಸಕ್ಕೆ ಇದನ್ನ ಹಾಕ್ರಂತೂ ಭಾರಿ ಲಾಯ್ಕಿರತ್ತ್. ಕಡಿಗೆ ಗ್ವಾಯ್ ಹಣ್ನೆಲ್ಲಾ ಬಿಳ್ದ್ ಹೋಯಿ ನಾಕ್ ಮಳಿ ಬಿದ್ರ್ ಕೂಡ್ಲೆ ಮಕ್ಳೆಲ್ಲಾ ಗ್ವಾಯ್ ಮರದ ಅಡಿಯೇ. ಎಂತಕಂದ್ರೆ ಬಿದ್ದ್ ಹುಟ್ಟದ್ ಗ್ವಾಯ್ ಬೀಜ ಬೆದಿ ಬಂದಿರತ್ತಲ್ದಾ.. ಅದ್ ದೊಡ್ಡದಾಯ್ಕಿದ್ರೇ ಹುಡ್ಕಿ ಅದರ ಎಸಳು ಹಿಡ್ಕಂಡ್ ತಿಂತಾ ಇದ್ರೆ… ಹ್ಯಾಂಗೆ ಹೇಳುದ್ ಅದ್ರ್ ರುಚಿ… ಆರೆ ಅದೆಲ್ಲಾರೂ ಚೂರು ಬೆಳದ್ರೆ ಅದ್ರ ರುಚಿ ಪೂರಾ ಹೋಯಿ ಒಂದ್ನಮನಿ ರಬ್ಬರ್ ಜಗ್ದಾಂಗ್ ಆತ್ತ್

images

ಆಗೆಲ್ಲಾ ಜೋರ್ ಮಳಿ ಬಂದ್ರ್ ಸಾಕ್.. ಶಾಲಿಗೆ ರಜಿ… ಯಾಕಂದ್ರೆ ಹೊಳಿ, ತೋಡ್, ಹಳ್ಳ ದಾಟ್ಕಂಡ್, ಸಂಕದ ಮೇಲೆ ನೆಡ್ಕಂಡ್ ಬಪ್ಪರಿಗೆ ಮನಿಗೆ ಹೋಪುಕೆ ಕಷ್ಟ ಆಪ್ಕಾಗ ಅಂದೇಳಿ. ನಾನ ಸಿದ್ಧಾಪ್ರದಗೆ ಎಂಟನೇ ಕ್ಲಾಸಿಗೆ ಹೋಪ್ ಸಮಿಗೆ ಒಂದಿನ ಜೋರ್ ಮಳಿ ಬಂದ್ ಶಾಲಿಗ್ ಬೆಳಿಗ್ಗೆಯೆ ರಜಿ ಕೊಟ್ಟಿದ್ರ್. ಮನಿಗ್ ಹೋಪ ಅಂದ್ರೆ ಹತ್ತ್ ಗಂಟಿ ಬಸ್ಸ್ ಹೋಯಾಯಿತ್ತ್. ಇನ್ನ್ ಬಸ್ ಇಪ್ದ್ ಹನ್ನೆರ್ಡ್ ಗಂಟಿಗೇ ಸೈ. ಸರಿ ಎಂತ ಮಾಡುದ್ ಅಂದೇಳಿ ನಂ ಬದಿಗೆ ಹೋಪ ಮಕ್ಳೆಲ್ಲಾ ಒಟ್ಟಾಯಿ ಮಾತಾಡ್ಕಂಡ್… ನೆಡ್ಕಂಡ್ ಹೋಪ ಅಂದೇಳಿ ತೀರ್ಮಾನ ಆಯ್ತ್. ಸಿದ್ಧಾಪ್ರದಿಂದ ನಮ್ಮ್ ಮನಿಗೆ ಸುಮಾರ್ ಹನ್ನೊಂದ್-ಹನ್ನೆರ್ಡ್ ಕಿಲೋಮೀಟ್ರ್ ಆತ್ತ್. ಆರೆ ಆಗ್ಳಿಕೆ ಅದೆಲ್ಲ ಒಂದ್ ಲೆಕ್ಕವಾ? ಸರಿ ಹೊರ್ಟೇ ಬಿಡ್ತ್. ನಮ್ಗ್ ಶಾಲಿ ಬಿಡುಕೂ ಮಳಿ ಕೈದ್ ಆಪುಕೂ ಸಮಾ ಆಯ್ತ್. ಆರೂ ನಾಕೆಂಟ್ ಹುಂಡ್ ಬೀಳ್ತಾ ಇದ್ದಿತ್. ಹೀಂಗೆ ಪಟ್ಟಾಂಗ ಹೊಡಿತಾ ನೆಡ್ಕಂಡ್ ಹೋಪತಿಗೆ , ದಾರಿ ಬದ್ಯಗೆ ಒಂದ್ ಬದಿ ಉಜರ್ ಬತ್ತಾ ಇದ್ದಿತ್ತ್. ಅಲ್ಲೇ ಬುತ್ತಿ ಊಟ ಮುಗ್ಸಿ, ಬುತ್ತಿ ತೊಳ್ಕಂಡ್ ಮತ್ತ ನೆಡುಕ್ ಶುರು ಮಾಡದ್ದೇ… ಮಾತಾಡ್ತಾ ಮಾತಾಡ್ತಾ ಕಮಲಶಿಲೆ ಪಾರಿ ಹತ್ತದ್ದೇ ಗೊತ್ತಾಯಲ್ಲ. ಪಾರಿ ಹತ್ತಿ ಆರ್ ಮೇಲೆ ನಮ್ಮ್ ಮಂಗನಾಟ ಶುರುವಾಯ್ತ್. ಎಲ್ಲ್ ನೆಲ್ಲಿಮರ, ಚಾಪಿ ಮರ, ಚೂರಿ ಹಣ್ಣಿನ ಗಿಡ, ನೇರ್ಲ್ ಮರ ಅಂದೇಳಿ ಹುಡ್ಕಂಡ್ ಸಿಕ್ಕದ್ದನ್ನೆಲ್ಲಾ ಗುಳುಂ ಸ್ವಾಹಾ ಮಾಡಿ, ಚಡ್ಡಿ ಕಿಸಿಗಿಷ್ಟ್, ಬುತ್ತಿ ಒಳ್ಗ್ ಇಷ್ಟ್ ಅಂದೇಳಿ ತುಂಬಿ ಮನಿಗ್ ಬಪ್ಪತಿಗೆ ಮೂರ್ ಗಂಟಿ ಬಸ್ಸಿನ ಹಾರ್ನ್ ಕೇಂತಾ ಇದ್ದಿತ್ತ್. ಅಷ್ಟ್ ನೆಡದ್ರೂ ಸಾಕಾಯ್ತ್ ಅಂತ ಅನ್ಸಲೇ ಇಲ್ಲ.

ಹೀಂಗೇ ಹೇಳುಕ್ ಹೊರಟ್ರೆ ಈ ನಮನೀದ್ ಸುಮಾರ್ ಕತಿ ಇತ್ತ್. ಎಲ್ಲಾ ಇವತ್ತೇ ಹೇಳ್ರೆ ನಾಳಿಗೂ ಒಂಚೂರ್ ಬ್ಯಾಡ್ದಾ? ನಿಮ್ದೂ ಹೀಂಗಿಂದೆಂತಾರೂ ನೆನ್ಪ್ ಇದ್ರೆ ಹೇಳಿ ಕಾಂಬ 🙂