ಈ ಬದಿಗ್ ಬಾರ್ದೆ…ಭರ್ತಿ 10 ತಿಂಗ್ಳ್ ಆಯ್ತ್. ಅದೆಂತದೊ ಗಜಗರ್ಭ ಅಂತ್ರಲ್ದಾ ಹಾಂಗಿನ್ ಕತಿ ಆಯ್ತ್. ಇವತ್ತ್ ಬರಿತೆ ನಾಳೆ ಬರಿತೆ… ನಾಡ್ದಿಗಂತೂ ಬರ್ದೇ ಶುದ್ಧ ಅಂದ್ಕಂಡ್ ಅಂದ್ಕಂಡ್…. ದಿನ ಮಸ್ತ್ ಆಯ್ತ್. ಇವತ್ತ್ ಎಂತಾರೂ ಸೈಯೇ… ಬರಿದೆ ಬಿಡುದಿಲ್ಲ ಅಂದೇಳಿ ಎಣ್ಸಕಂಡ್ ಉದಾಶಿನ ಎಲ್ಲ ಒಟ್ಟ್ ಮಾಡಿ ಪೆಟ್ಗಿಒಳ್ಗೆ ಹಾಕಿ ಬರುಕ್ ಕೂಕಂಡಿದೆ…ಈ ಬ್ಲಾಗಿನ್ ಕತಿಯೇ ಹೀಂಗೆ ಕಾಣಿ… ಬರಿತಾ ಇದ್ರೆ, ಒಂದಲ್ಲಾ ಒಂದ್ ವಿಷ್ಯ ಬರುಕ್ ಸಿಕ್ಕತ್ತ್… ಒಂದ್ ನಾಕ್ ದಿನ ಬರುದ್ ನಿಲ್ಸ್ರೆ ಸಾಕ್.. ಎಂತಾ ಬರುದ್ ಎಂತಾ ಬರುದ್ ಅಂದೇಳಿ ದಿನ ಹೊದ್ದೇ ಗೊತ್ತಾತಿಲ್ಲ..ಮೊದ್ಲ್ ಎಷ್ಟೇ ಬರದ್ದಿದ್ರೂ ಈಗ ಪುನ ಗಣ್ಪತಿ ಪದ್ಯದಿಂದ್ಲೇ ಶುರು ಮಾಡ್ಕಾತ್ತ್…

ಅಂದಾಂಗೆ ನಾಡ್ದ್ ಹನ್ನೊಂದ್ನೇ ತಾರೀಕ್ ಬಂದ್ರೆ ಬ್ಲಾಗಿಗೆ ಮೂರ್ ವರ್ಷ ಆತ್ತ್. ಇಷ್ಟ್ ದಿನ ಹ್ಯಾಂಗಿದ್ರೂ ಬ್ಲಾಗಿಗೆ ಉಪ್ವಾಸವೇ ಆಯ್ತ್. ಹುಟ್ದಬ್ಬನಾರೂ ಗಡ್ಜಾಯಿ ಮಾಡಿ ಹೊಟ್ಟಿ ತುಂಬಾ ಊಟ ಹಾಕುದ್ ಬ್ಯಾಡ್ದಾ ಹಂಗಾರೆ…. ಅದಕ್ಕೇ ಇವತ್ತ್ ಅರ್ಧ ದಿನ ಕೂತ್ಕಂಡ್ ಹುಟ್ದಬ್ಬಕ್ಕೆ ಅಡ್ಗಿ ಮಾಡದ್ದೇ ಮಾಡದ್ದ್…. ನೀವೂ ಬಂದ್ ಒಂದೆರ್ಡ್ ತುತ್ತ್ ತಿನ್ಕಂಡ್ ಹೋರೆ ನಂಗೂ ಖುಶಿಯಾತ್ತ್ ಕಾಣಿ.. ಹುಟ್ದಬ್ಬಕ್ಕೆ ಬರೀ ಕೈ ಬೀಸ್ಕಂಡ್ ಬರ್ಬೆಡಿ.. ಎಂತಾರೂ ಹಿಡ್ಕಂಡ್ ಬನಿ… ಅಂದ್ರೆ ಓದಿ ನಿಮ್ಮ ಅಭಿಪ್ರಾಯ ನಂಗ್ ಹೇಳ್ರೆ ಅದೇ ನೀವ್ ಕೊಡು ಉಡ್ಗ್ರಿ…  🙂

ಮೊನ್ನೆ ಮೊನ್ನೆ ಒಂದ್ ಸುದ್ದಿ ಗೊತ್ತಾಯ್ತ್… ಕುಂದಾಪ್ರ ಕನ್ನಡದಗೆ ಒಂದ್ ಆಲ್ಬಮ್ ಬಂದಿತಂಬ್ರ್.. ಯೆಂತ ಮದಿ ಆಲ್ಬಮ್ಮಾ ಕೇಣ್ಬೇಡಿ… ಮ್ಯುಸಿಕ್ ಆಲ್ಬಮ್ ಮಾರಾಯ್ರೆ…ರವಿ ಬಸ್ರೂರು ಅಂಬರೊಬ್ರ್ ಒಂದಿಷ್ಟ್ ಜನಿನ್ ಒಟ್ಮಾಡಿ ಒಂದ್ ಒಳ್ಳೆ ಕೆಲ್ಸ ಮಾಡಿರ್… ಆಲ್ಬಮ್ಮಿದ್ ಹೆಸ್ರೇ ಗಮ್ಮತಿತ್ತ್… ಪಣ್ಕ್ ಮಕ್ಕಳ್ ಅಂದೇಳಿ…ಆದ್ರದ್ ಒಂದ್ ಸಣ್ಣ್ ಶ್ಯಾಂಪಲ್ ಇಲ್ಲಿತ್ತ್ ಕಾಣಿ…

http://www.youtube.com/watch?v=XBP9LCUdlOc

ಆ ಅಲ್ಬಮ್ ಬಿಡುಗಡೆ ಸೈತ ಆಯ್ತಂಬ್ರ್…ಆ ಸಮಾರಂಭದ ಒಂದ್ ಸಣ್ಣ್ ವೀಡ್ಯೊ ಸೈತ ಇತ್ತ್…

http://www.youtube.com/watch?v=XMzSeUEIuXI&feature=related

ಇದ್ರದ್ದ್ ಸೀಡಿ ಊರ್ಬದಿಯಗೆ ಸಿಕ್ಕತ್ತಿರ್ಕ್.. ಬೆಂಗ್ಳೂರಗೆ ಎಲ್ಲಾರೂ ಸಿಕ್ಕತ್ತಾ ಕಾಣ್ಕ್…ನಿಮ್ಗೆಲ್ಲಾರೂ ಎಲ್ಲ್ ಸಿಕ್ಕತ್ತ್ ಅಂದೇಳಿ ಗೊತ್ತಿದ್ರೆ ನಂಗ್ ಹೇಳಿ ಅಕಾ? ಹನುಮಂತ ನಗರದಗೆ ಕ್ಯಾಸೆಟ್ ಕಾರ್ನರವ್ರದ್ದ್ ಒಂದ್ ಅಂಗ್ಡಿ ಇತ್ತ್.. ನಾನ್ ಯಕ್ಷಗಾನ ಸೀಡಿ ತಕಂಬ್ದೆಲ್ಲ ಅಲ್ಲೇ. ಇನ್ನೊಂದ್ ಸರಿ ಆ ಬದಿಗೆ ಹೋರೆ ಸಿಕತ್ತಾ ಕಾಣ್ಕ್

ಗಣ್ಪತಿ ಪದ್ಯ ಆಯ್ತಲ…. ಇನ್ನ್ ಹಗೂರಕ್ಕೆ ಬಾಲಗೋಪಾಲ, ಸ್ತ್ರೀವೇಷ ಒಡ್ಡೋಲ್ಗ ಶುರು ಮಾಡುಕ್ ಅಡ್ಡಿಲ್ಲ 🙂

ಅಂದ್ಹಾಂಗೆ…..ಬಾಲಗೋಪಾಲ ಸ್ತ್ರೀ ವೇಷ ಅಂದ್ರ್ ಕೂಡ್ಲೆ ನೆನ್ಪಾಯ್ತ್ ಕಾಣಿ… ಯಕ್ಷಗಾನದ ಸುಮಾರ್ ಆಡಿಯೋ ಎಲ್ಲಾ ಕನ್ನಡ ಆಡಿಯೊ.ಕಾಮ್ ಸೈಟಗೆ ಸಿಕ್ಕತ್ತ್… ಪುರ್ಸೊತ್ತಿದ್ರೆ ಕೇಂಡ್ ಕಾಣಿ ಸುಮಾರ್ ಪ್ರಸಂಗ ಇತ್ತ್

http://www.kannadaaudio.com/Songs/Yakshagana/home/

ಇವತ್ತ್ ಇನ್ನೊಂದಿಷ್ಟ್ ಕುಂದಾಪ್ರ ಬದಿ ಶಬ್ದ ಹೆಕ್ಕಿ ಹಿಡ್ಕಂಡ್ ಬಂದಿದೆ.. ಹೆಕ್ಕುಕೆ ಎಲ್ಲ್ ಬಿದ್ದೊಯಿತ್ತಾ ಅಂದೇಳಿ ಕೇಣ್ಬೇಡಿ ಮತ್ತೆ.. ಆಯ್ತ್ ಹುಡ್ಕಿ ಹಿಡ್ಕಂಡ್ ಬಂದಿದೆ.. ಹುಡ್ಕುಕೆ ಎಲ್ಲ್ ಕಳ್ದೋಯಿತ್ ಅಂದೇಳಿ ಕೇಂಡ್ರ್ಯಾ? ಇರ್ಲಿ ಬಿಡಿ… ಚೌಕಿ ಬಿಟ್ಟ್.. ಸೀದಾ ರಂಗಸ್ಥಳಕ್ಕೇ ಬಪ್ಪ ಈಗ…

ಕೈಕೋಚ್= ತೊಂದರೆ, ಇಕ್ಕಟ್ಟು (ಕನ್ನಡ ಸಂಕ್ಷಿಪ್ತ ನಿಘಂಟು)

ಈ ಶಬ್ದದ್ ಅರ್ಥ ತೊಂದರೆ,ಇಕ್ಕಟ್ಟು ಅಂದೇಳಿ ಇತ್ತಾರೂ ಇದನ್ನ್ ತುಂಟತನ-ಕಿತಾಪತಿ-ಕೀಟಲೆ ಅಂತ್ ಹೇಳುಕೆ ಹೆಚ್ಚಾಯಿ ನಮ್ ಬದಿಯಗೆ ಉಪ್ಯೋಗಿಸ್ತ್ರಾಯಿ ಕಾಣತ್

ಬಳಕೆ:

೧. ಆ ಮಾಣಿ ಒಂದ್ ಗಳ್ಗಿ ಸುಮ್ನ್ ಕೂಕಂತಿಲ್ಲ, ಹೋದಲ್ಲ್ ಬಂದಲ್ಲ್ ಸತೇ ಒಂದ್ ಕೈಕೋಚಂದ್ರೆ ಅಷ್ಟಿಷ್ಟಲ್ಲಾ… ಹೇಳಿ ಪೂರೈಸುಕಾಪ್ದಲ್ಲ

೨.ನಿನ್ನ್ ಕೈಕೋಚೆಲ್ಲ ನಿಲ್ಸಿ ಕೊಡ್ತೆ ಕಾಣ್. ದಿನಾ ಹುಣ್ಸಿ ಅಡ್ರಗೆ ಎರ್ಡೆರ್ಡ್ ಬಾರ್ಸ್ರೆ ಮಾತ್ರ ನೀ ಸುಮ್ನಾಯ್ಕಂಬ್ದಾ ಕಾಣತ್

ಚಾಷ್ಟಿ, ಚ್ಯಾಷ್ಟಿ= ತುಂಟತನ, ಕೀಟಲೆ

ಇದು ಚೇಷ್ಟೆ ಅನ್ನುವ ಪದದ ಕುಂದಾಪುರ ರೂಪ

ಇದೂ ಸೈತ ಕೈಕೋಚಿಗೆ ತೀರಾ ಹತ್ರದ್ ಶಬ್ದ. ಹೆಚ್ಚೂಕಡ್ಮಿ ಅದೇ ಅರ್ಥ ಬತ್ತ್

ಬಳಕೆ:

೧. ಶಾಲಿಗ್ ರಜಿ ಸಿಕ್ಕದ್ದೇ ಸೈ.. ಮಕ್ಳೆಲ್ಲಾ ಒಟ್ಟಾರಲ್ದಾ… ಸೈ ಬಿಡಿ.. ಇನ್ನ್ ಅವ್ರ್ ಚಾಷ್ಟಿ ತಡುಕೆಡ್ಯಾ

೨.ಮಗೂ ಸಣ್ದ್ ಅಂದ್ರ್ಯಾ… ಅಬ್ಬಾ ಅದ್ರ್ ಚ್ಯಾಷ್ಟಿಯೇ… ಬಲಾದ್ ಮಕ್ಳನ್ನಾರೂ ಸುಧಾರ್ಸಲಕ್ಕ್.. ಈ ಮಗಿನ ಸುಧಾರ್ಸುಕೆ ಎಡುದಿಲ್ಲ

ದರ್ಶಿನ= ಮೈಮೇಲೆ ದೇವ-ದೈವಗಳ ಆವಾಹನೆಯಾಗುವುದು

ಇದಕ್ಕೆ ಕುಂದಾಪ್ರ ಕನ್ನಡದಗೆ “ಮೈಮೇಲ್ ಬಪ್ಪುದ್” ಅಂತ್ ಸತೇ ಹೇಳ್ತ್ರ್.

( ಏನಾದರೂ ತೊಂದರೆ ತಾಪತ್ರಯಗಳು ಬಂದಾಗ, ಪಾತ್ರಿ ಅಂತ ಕರೆಯಲ್ಪುಡುವ ವ್ಯಕ್ತಿಯ ಮೈಮೇಲೆ ದೇವ-ದೇವತೆಗಳನ್ನು ಆವಾಹಿಸಿ ತಮ್ಮ ತೊಂದರೆ, ಸಂಕಷ್ಟಗಳನ್ನು ದೇವರ ಮುಂದೆ ನಿವೇದಿಸಿಕೊಂಡು ಅದಕ್ಕೆ ಪರಿಹಾರ,ಸಲಹೆಗಳನ್ನು ಪಡೆಯುವ ಒಂದು ವಿಶಿಷ್ಟ ವಿಧಿ-ವಿಧಾನ. ಇಲ್ಲಿ ಯಾವ ದೇವರು ಅಥವಾ ದೈವದ ಆವಾಹನೆ ನಡೆಸಲಾಗುತ್ತದೋ ಆ ದೇವರು-ಯಾ-ದೈವವೇ ಪಾತ್ರಿಯ ಬಾಯಲ್ಲಿ ತನ್ನ ನುಡಿಯನ್ನು ನುಡಿಸುತ್ತದೆ ಅನ್ನುವುದು ನಂಬಿಕೆ.ಇದರ ಸತ್ಯಾಸತ್ಯತೆಗಳ ಬಗ್ಗೆ ನಾನಿಲ್ಲಿ ಚರ್ಚಿಸಲು ಹೋಗುವುದಿಲ್ಲ. ಎಲ್ಲ ಅವರವರ ಭಾವ-ಭಕುತಿಗೆ ಬಿಟ್ಟ ವಿಚಾರ. ಆದರೆ ಈ ಪ್ರಕ್ರಿಯೆಯಲ್ಲಿ ಇರುವ ವೈಶಿಷ್ಟ್ಯವೆಂದರೆ ತುಂಬಾ ಕಷ್ಟದಲ್ಲಿರುವವರಿಗೆ ಹೇಳಿಕೊಳ್ಳಲಾಗದ ದುಃಖ ಇರುವವರಿಗೆ, ಸಮಸ್ಯೆಗಳ ಸುಳಿಯಲ್ಲಿ ಸಿಲುಕಿದವರಿಗೆ ತಮ್ಮ ಕಷ್ಟ-ಕೋಟಲೆಗಳನ್ನು ದೇವರ ಮುಂದೆ ನಿವೇದಿಸಿಕೊಂಡು ಮನಸ್ಸುಹಗರಾಗಿಸಿಕೊಂಡು ಸಮಾಧಾನ ಹೊಂದುತ್ತಾರೆ. ಅವರ ಸಮಸ್ಯೆ ಪರಿಹಾರವಾಗುತ್ತದೋ ಇಲ್ಲವೋ ಅನ್ನುವುದನು ಒತ್ತಟ್ಟಿಗಿಟ್ಟು ನೋಡಿದರೂ… ಕುಸಿದು ಹೋದ ಭರವಸೆ ಮರಳಿಸಿ ಒಂದಿಷ್ಟು ಸಮಾಧಾನವು ಅವರಲ್ಲಿ ಹೊಸ ಹುಮ್ಮಸ್ಸು ತುಂಬುತ್ತದನ್ನುವುದಂತೂ ಹದಿನಾರಾಣೆ ನಿಜ!! ನಗರಗಳಲ್ಲಿ ಕೌನ್ಸಿಲಿಂಗ್ ಎಂಬ ದೊಡ್ಡ ದೊಡ್ಡ ಶಬ್ದ ಬಳಸುತ್ತೆವೆ…. ಕೌನ್ಸಿಲಿಂಗಿನ ಎಂತಾ ಸರಳ-ಸುಲಭ ಗ್ರಾಮ್ಯ ರೂಪ ನೋಡಿ ಈ ದರ್ಶಿನ. ನಾವೂ ಮೂಢ ಅಂತ ಲೇವಡಿ ಮಾಡುವ ನಂಬಿಕೆಗಳಲ್ಲೂ ಎಂತಾ ತಿರುಳಿರುತ್ತೆ ನೋಡಿ. ನಾವು ಬರೀ ಸಿಪ್ಪೆಯನ್ನು ನೋಡಿ ಒಣಗಿದೆ ಅಂತ ತೀರ್ಮಾನಕ್ಕೆ ಬಂದು ಬಿಡುತ್ತೇವೆ. ಸಿಪ್ಪಿ ಬಿಡಿಸಿ ನೋಡಿದರೆ ಸಿಹಿಯಾದ ರಸಭರಿತ ತಿರುಳಿರಬಹುದಲ್ಲವೇ? ಇದೆಯೋ ಇಲ್ಲವೋ ಸಿಪ್ಪೆ ಸುಲಿದರೆ ತಾನೆ ಗೊತ್ತಾಗೋದು.. ಇರಲಿ, ನನ್ನ ಪುರಾಣವೇ ಉದ್ದವಾಯ್ತು

ಅಂದ ಹಾಗೆ.. ಈ ಶಬ್ದವನ್ನು ಅತಿಯಾದ ಕೋಪದಿಂದ ತರತರ ನಡುಗುವವರನ್ನು ಲೇವಡಿ ಮಾಡಲು ಸಹಾ ಬಳಸುತ್ತಾರೆ)

ಬಳಕೆ:

೧. ಮಗಿಗೆ ಏಗ್ಳಿಕ್ ಕಂಡ್ರೂ  ಹುಷಾರಿಪ್ಪುದಿಲ್ಲ. ಒಂದ್ ದರ್ಶಿನ ಮಾಡಿಯಾರೂ ಕೇಣ್ಲಕ್ಕಿತ್ತ್

೨.ಸಿಟ್ಟ್ ಬಂದ್ರ್ ಸಾಕ್… ಮೈಮೇಲ್ ದರ್ಶಿನ ಬಂದರ್ ಕಣಗ್ ಆಡ್ತ

ತಾಳ್ಸು= ಬೀಳಿಸು

(ತಾಳಿದವನು ಬಾಳಿಯಾನು ಅಂದೇಳಿ ಒಂದ್ ಗಾದಿ ಮಾತ್ ಇತ್ತಲ್ದಾ. ಅದನ್ನ ಕುಂದಾಪುರ ಕನ್ನಡದ ಅರ್ಥದಗೆ (ತಾಳು=ಬೀಳು) ಕಂಡ್ರೆ -ತಾಳಿದವನು ಹೇಗೆ ಬಾಳಿಯಾನು ಅಂತ ಕೇಣ್ಕಾತ್ತ್ ಕಾಣಿ  J)

ಬಳಕೆ:

೧. ಮಾಯ್ನ್ ಕಣ್ಣ್ ಕೈಗ್ ನೀಕುದಿಲ್ಲ. ಒಂದ್ ಅಡ್ಡ್-ಬಡ್ತಿಗೆ ಸಿಕ್ಕಿರೆ ಒಂದ್ ನಾಲ್ಕ್ ಹಣ್ಣ್ ಒಂದೇ ಪೆಟ್ಟಿಗೆ ತಾಳ್ಸುಕಾತಿತ್ತ್

೨.ಗ್ವಾಯ್ ಹಣ್ಣ್ ತಾಳ್ಸುಕಂದೇಳಿ ಕಲ್ಲ್ ಹೊಡಿಬೇಡಿ ಮಕ್ಳೇ.. ಮಿಜ್ರ್ ಪೂರಾ ಉದ್ರಿ ಹೋತ್ತ್… ಬೇಕಾರೆ ಕೊಕ್ಕಿ ತಂದ್ಕಂದ್ ಕೊಯ್ಕಣಿ

ಬಯಿನ್ ತೇರ್, ಬಯಿಂತೇರ್= ಬೈಗಿನ ತೇರು, ಸಂಜೆ ಹೊತ್ತು ರಥ ಎಳೆಯುವುದು

(ನಮ್ಮೂರ ಕಡೆ ಜಾತ್ರೆಲ್ಲಿ ಸಂಜೆಯ ಹೊತ್ತು ಎರಡನೆ ಬಾರಿ ರಥವನ್ನು ರಥಬೀದಿಯಲ್ಲಿ ಭಕ್ತರು ಎಳೆಯುತ್ತಾರೆ. ಅದಕ್ಕೆ ಬಯಿಂತೇರ್ ಅಂದರೆ ಬೈಗಿನ ಹೊತ್ತಿನ ತೇರು ಅನ್ನುತ್ತಾರೆ)

ಬಳಕೆ:

೧. ಬೆಳಿಗ್ಗೆ ಹಬ್ಬಕ್ ಹೋಪ್ಕಾಯಿಲ್ಲ.. ಮಧ್ಯಾನ್ಮೇಲಾರೂ ಹೋಯಿ ಬಯಿಂತೇರ್ ಆರೂ ಕಂಡ್ಕಂದ್ ಬರ್ಕಮಗಿತ್ತ್

ಹಪ್ಪು ನಾತ = ಸಹಿಸಲಾಗದಂಥ ದುರ್ವಾಸನೆ

ಬಳಕೆ:

೧. ಅವ್ರ್ ಹತ್ರ ಹೋರ್ ಸಾಕ್. ಹಪ್ಪ್ ನಾತ ಹೊಡಿತ್ತ್. ಅಂಗಿ ಪಂಜಿಗೆ ನೀರ್ ತೋರ್ಸಿ ಎಷ್ಟ್ ದಿನ ಆಯ್ತೇನೋ

೨.ಮೀಕಿದ್ರೆ ಮೊದ್ಲೇ ಬಟ್ಟಿ ಎಲ್ಲ ಒಗ್ದ್ ಬಿಡ್. ಹಾಂಗೆ ಬಿಟ್ರೆ ಅಲ್ಲೇ ಚೆಂಡಿ ಆಯಿ ನಾಳಿಗೆ ಹಪ್ಪ್ ನಾತ ಹೊಡಿತ್ತ್

ಬೆಳ್ಗಿನ ಜಾಮ, ಬೆಳಿಂಜಾಮ = ಬೆಳಗಿನ ಜಾವ, ನಸುಕು

(ಜಾವ ಅಂದರೆ ದಿನದ ಎಂಟನೇ ಒಂದು ಭಾಗ. ಒಂದು ಜಾವ ಅಂದರೆ ಸರಿಸುಮಾರು ಮೂರು ಗಂಟೆಗಳ ಕಾಲ)

ಬಳಕೆ:

೧. ನಾಳೆ ದೀಪಾವಳಿ ಅಲ್ದಾ, ಎಲ್ಲ ಬೆಳ್ಗಿನ್ ಜಾಮ ಬೇಗ್ ಎದ್ದ್ ಎಣ್ಣಿ-ನೀರ್ ಹಾಯ್ಕಂಡ್ ಮೀಕ್

೨.ಬೆಳ್ಗಿನ್ ಜಾಮಕ್ಕೆ ಎದ್ಕಂಡ್ ಆ ನಾಯಿ ಒರ್ಲುಕ್ ಶುರು ಮಾಡತ್ತ್. ಒಂದ್ಗಳ್ಗಿ ನಿದ್ರಿ ಮಾಡುಕೂ ಬಿಡುದಿಲ್ಲ

ಜಾಪ್ = ಚಾಪು

(ಇದು ಮೂಲತಃ ಮದ್ದಲೆ ಅಥವಾ ತಬಲ ಬಾರಿಸುವ ಒಂದು ಬಗೆಯ ಗತ್ತನ್ನು ಸೂಚಿಸುವ ಪದ. ಆದರೆ ಆಡುಮಾತಿನಲ್ಲಿ ಹುಸಿ ಜಂಬ, ಬಿಂಕ, ಗತ್ತು, ಒಣ ಪ್ರತಿಷ್ಟೆ ತೋರಿಸುವುದನ್ನು ಸೂಚಿಸಲು ಬಳಸಲಾಗುತ್ತದೆ)

ಬಳಕೆ:

೧. ಹೊಸ ಅಂಗಿ ಹಾಯ್ಕಂಡ್ ಬಂದಿದೆ ಅಂದೇಳಿ ಜಾಪ್ ಮಾಡುದ್ ಕಾಣ್. ಮಾತಡ್ಸರೆ ಸತೇ ಮಾತಾಡುದಿಲ್ಲ

೨.ನಿನ್ನ್ ಜಾಪೆಲ್ಲ ಇದ್ರೆ ಮನ್ಯಗ್ ಇಟ್ಕೋ.. ನನ್ನತ್ರ ಅದೆಲ್ಲ ನೆಡುದಿಲ್ಲ ಅಕಾ

ಬಿಲಾಸ್ ಬಿಡು = ಮನಬಂದಂತೆ ವರ್ತಿಸು , ಯಾರ ಅಂಕೆಗೂ ಸಿಗದಿರು

( ಈ ಶಬ್ದದ ಮೂಲದ ಬಗ್ಗೆ ಸಾಕಷ್ಟು ಹುಡುಕಿದೆ. ಆದರೆ ಖಚಿತವಾದ ಮಾಹಿತಿ ಸಿಗಲಿಲ್ಲ. ಬಿಲಾಸ್ ಅನ್ನುವುದು ವಿಲಾಸ ಅನ್ನುವ ಪದದಿಂದ ಬಂದಿರಬಹುದೇ ಅನ್ನುವುದು ನನ್ನ ಊಹೆ ಮಾತ್ರ. ಯಾರಿಗಾದರೂ ಗೊತ್ತಿದ್ದರೆ ತಿಳಿಸಿ)

ಬಳಕೆ:

೧. ಅವ ಹತ್ತಾ ಬಿಲಾಸ್ ಬಿಟ್ಟ್ ಹೋಯಿದ. ಎಂತಾರು ಹೇಳ್ರೆ ಬರೀ ಉಲ್ಟವೇ

೨. ಯಾರಾರೂ ಈ ನಮನಿ ಬಿಲಾಸ್ ಬಿಟ್ಟ್ ಹೋಪುಕಾಗ.

 

ಟಿಪ್ಪಣಿಗಳು
  1. MMaravanthe. ಹೇಳುತ್ತಾರೆ:

    ಹ್ವಾಯಿ! ಅಡ್ಠಿಲ್ಯೆ ತಡ ಬಂದ್ರೂ, ಗಡ್ಹದ ಇತ್.

  2. Sadananda Adiga ಹೇಳುತ್ತಾರೆ:

    googd to see you back.

    please write about Kaamba 2010 held at Kota. its a kundapra kannada festival.

  3. ವಿಜಯರಾಜ್ ಕನ್ನಂತ ಹೇಳುತ್ತಾರೆ:

    ಇಲ್ಲಿಗ್ ನೀವೆಲ್ಲ ಬಂದದ್ಡ್ ಕಂಡ್ ಖುಷಿ ಆಯ್ತ್.. ಹೀಂಗೆ ಬತ್ತಾ ಆಯ್ಕಣಿ 🙂

  4. Clinton Dsouza ಹೇಳುತ್ತಾರೆ:

    Good to see you back with a bang… Keep writing….

  5. Pradeep ಹೇಳುತ್ತಾರೆ:

    thanks for coming back.. keep updating

  6. Shantala ಹೇಳುತ್ತಾರೆ:

    Blog Mast Itt kani!!!

  7. Ashok Kumar B ಹೇಳುತ್ತಾರೆ:

    ಸೀಡಿ ಎಲ್ ಸಿಕ್ಕತ್ ಅಂಥ ಗೊತ್ತಾರೆ ನಮಗೂ ಒಂದ್ ಚೂರ್ ತಿಳ್ಸಿ

  8. ಯೋಗೀಶ ಅಡಿಗ ಹೇಳುತ್ತಾರೆ:

    ತಡಾ ಬರ್ದ್ರೂ ಭಾರಿ ತೂಕ ಇತ್ತ್ ಬ್ಲಾಗಂಗೆ… ಸಾಪಿತ್ ಮಾರಾಯ

ನಿಮ್ಮ ಟಿಪ್ಪಣಿ ಬರೆಯಿರಿ