Archive for ಮೇ, 2008


ಅಲ್ಲ ಮರಾಯ್ರೆ ಕುಂದಾಪ್ರದಗೆ ಈ ಸರ್ತಿ ಎಲೆಕ್ಷನ್ ಭಯಂಕರ ಟೈಟ್ ಅಂಬ್ರಲಾ ಹೌದೇ ಇದು? ಯಾರ್ ಬಾಯಗ್ ಕೇಂಡ್ರೂ ಒಂದೇ ಮಾತಪ್ಪಾ.. ಈ ಸರ್ತಿ ಯಾರ್ ಗೆಲ್ಲೂದ್ ಅಂದೇಳಿ ಈಗ್ಳೇ ಹೇಳುದ್ ಕಷ್ಟಾ ಮಾರ್ರೆ.. ಶೆಟ್ರಿಗೂ ಹೆಗ್ಡೆಯರಿಗೂ ಜೋರ್ ಫೈಟ್ ಇತ್ತ್ ಗೊತ್ತಿತಾ? ಯಾರ್ ಗೆದ್ರೂ ಮೂರ್ನಾಕ್ ಸಾವ್ರದ್ ಒಳ್ಗೇ ಕಾಣಿ ಬೇಕಾರೆ… ಎಂತಾರೂ ಓಟಿನ್ ಪೆಟ್ಗಿ ಬಿಚ್ಚುವರಿಗೆ ಎಂತದೂ ಹೇಳುಕ್ ಬತ್ತಿಲ್ಲ್ಯೇ…

 

ಅದೆಂತದೋ ಕ್ಷೇತ್ರ ವಿಭಜನೆ ಅಂಬ್ರಪ್ಪ. ಅದನ್ ಮಾಡಿ ನಮ್ ಬ್ರಹ್ಮಾವರದ್ ಹೆಗ್ಡಿಯರಿಗ್ ಈಗ ಅವ್ರ್ ಎಸೆಂಬ್ಲಿ ಕ್ಷೇತ್ರವೇ ಇಲ್ಲ ಅಂಬ್ರ್ ಕಾಣಿ. ಅದ್ಕೇ ಅವ್ರು ಈ ಸರ್ತಿ ಈ ದಳ ಪಕ್ಷೇತರ ಅಂದೇಳಿ ನಿಂತ್ರೆ ಸುಖ ಇಲ್ಲ ಅಂದೇಳಿ ಕಾಂಗ್ರೆಸ್ ಸೇರ್ಕಂಡ್ ಕುಂದಾಪ್ರದಗೆ ನಿಂತ್ಕಂಡಿರ್. ಅವ್ರು ಮುಂಚೆ ದಳದಗೆ ಇದ್ರಲ್ದಾ ಆಗ್ಳಿಕೆ ಒಂಸರ್ತಿ ಮೀನುಗಾರಿಕಾ ಮಂತ್ರಿ ಆಯಿದ್ದಿರ್. ಬ್ರಹ್ಮಾವರ ಕ್ಷೇತ್ರದಗೆ ಮಸ್ತ್ ಕೆಲ್ಸ ಎಲ್ಲ ಮಾಡಿರ್ ಅಂದೇಳಿ ಎಲ್ಲಾ ಹೇಳ್ತ್ರಪ್ಪ. ಮುಂಚೆ ಜನತಾದಳ ಒಡ್ದ್ ಹೋಯ್ತಲ್ಲ ಆಗ್ಳಿಕೆ ಪಕ್ಷೇತರ ಆಯಿ ನಿಂತ್ಕಂಡ್ ಸತೇ ಗೆದ್ದಿರ್ ಅಂದ್ರೆ ಅವ್ರ್ ಕೆಪಾಸಿಟಿ ಬಗ್ಗೆ ಎರ್ಡ್ ಮಾತ್ ಇಲ್ಲ ಬಿಡಿ. ಕಳ್ದ್ ಸುಮಾರ್ ಸಲ್ದಿಂದ ಬರೀ ಹೆಸ್ರಿಗ್ ಮಾತ್ರ ನಿಂತ್ಕಂತಿದ್ದ ಕಾಂಗ್ರೆಸ್‌ನರ್ ಈ ಸರ್ತಿ ಏನಾರೂ ಮಾಡಿ ಕುಂದಾಪ್ರದಗೆ ಗೆಲ್ಕ್ ಅಂದೇಳಿ ಎಣ್ಸಕಂಡಿರ್.

 

ಆರೆ ಅದು ಅಷ್ಟು ಸುಲಭದಂಗೆ ಮಾತ್ರ ಆಪ್ ಬಾಬಲ್ಲ. ಯಾಕಂದ್ರೆ ಬೇರೆ ಯಾರೇ ಬಿ.ಜೆ.ಪಿ. ಯಿಂದ ನಿಂತ್ಕಂಡಿದ್ರೂ ಹೆಗ್ಡೆಯರ್ ಆರಾಮ್ ಆಯಿ ಗೆಲ್ತಿದ್ರೋ ಏನೋ.. ಆರೆ ಹಾಲಾಡಿ ಶ್ರೀನಿವಾಸ್ ಶೆಟ್ರನ್ನ್ ಅಷ್ಟು ಸುಲ್ಭದಗೆ ಸೋಲ್ಸುಕಂತೂ ಆತಿಲ್ಲ. ಅದೂ ಅಲ್ದೆ ಹೆಗ್ಡೆಯರ ಕ್ಷೇತ್ರ ಬ್ರಹ್ಮಾವರದ್ ಸುಮಾರ್ ಭಾಗ ಬೇರೆ ಉಡ್ಪಿಗ್ ಹೊಯ್ತ್ಂಬ್ರ್.

 

ಇನ್ನು ಶ್ರೀನಿವಾಸ್ ಶೆಟ್ರ ವಿಷ್ಯಕ್ ಬಂದ್ರೆ ಅವ್ರು ಯೇನ್ ಕಡ್ಮಿ ಜನ ಅಲ್ದೇ. ಕುಂದಾಪ್ರದ್ ವಾಜಪೇಯಿ ಅಂದೇಳಿ ಹೆಸ್ರ್ ಮಾಡ್ದರ್ ಅಲ್ದೇ ಅವ್ರು. ಅದೂ ಅಲ್ದೆ ಬಡವರಿಗೆ, ಕಷ್ಟದಗೆ ಇದ್ದಿರಿಗೆಲ್ಲ ಮಸ್ತ್ ಉಪ್ಕಾರ ಮಾಡಿರಂಬ್ರ್. ಕೊಡುಗೈ ದಾನಿ ಅಜಾತಶತ್ರು ಶೆಟ್ರು ಅಂತೇಳಿ ಎಲ್ಲ ಹೆಸ್ರ್ ಮಾಡಿರ್ ಮರಾಯ್ರೆ. ಅಲ್ದೆ ಯಾವ್ ರಗ್ಳಿ, ಗಲಾಟಿಯಗೂ ಸಿಕ್ಕುವರಲ್ಲ. ಒಟ್ಟ್ ಗೆದ್ದ್ ಮೇಲ್ ಊರ್ ಬದಿ ಮುಖ ತೋರ್ಸ್ದೆ ಇಪ್ಪರ್ ಮಧ್ಯ ಶ್ರೀನಿವಸ್ ಶೆಟ್ರು ಒಬ್ರ್ ಒಳ್ಳೆ ಜನ ಮರಾಯ್ರೆ ಅಡ್ಡಿಲ್ಲ ಅಂದೇಳಿ ಎಲ್ರೂ ಹೇಳ್ತ್ರಪ್ಪ. ಆರೆ ಒಂದೇ ಒಂದ್ ಪೈಂಟ್ ಅಂದ್ರೆ.. ಬಿ.ಜೆ.ಪಿ.ಯರ್ ಸ್ಟ್ರಾಂಗ್ ಇಪ್ಪ್ ಕುಂದಾಪ್ರದ್ ಕೆಲವ್ ಜಾಗ ಈ ಸರ್ತಿ ಬೈಂದೂರಿಗ್ ಸೇರಿತಂಬ್ರ್. ಅದೇನಾರೂ ಹೆಚ್ ಕಡ್ಮಿ ಆರೆ ಮಾತ್ರ ಶೆಟ್ರಿಗೆ ಕಷ್ಟ ಅಂದೆಳಿ ಎಲ್ಲಾ ಮಾತಾಡ್ತ್ರಪ್ಪ.

 

ಒಟ್ಟ್ರಾಶಿ ಕುಂದಾಪ್ರದಂತೂ ಎಲ್ಲ್ ಕಂಡ್ರೂ ಇದೇ ಮಾತ್, ಮದಿ ಮನಿಗ್ ಹೊಯ್ನಿ, ಹಬ್ಬದ್ ಗರಕ್ ಹೋಯ್ನಿ, ಸಂತಿಗ್ ಹೋಯ್ನಿ, ಬಸ್ಸಗ್ ಹೋಯ್ನಿ, ಬೇಕಾರ್ ಮೀನ್ ಮಾರ್ಕೇಟಿಗ್ ಹೋಯ್ನಿ ಎಲ್ಲರ ಬಾಯಗೂ ಒಂದೇ ಜಪ.. ಎಲೆಕ್ಷನ್ ಟೈಟ್ ಅಂಬ್ರಲ… ಇಬ್ರಗ್ ಯಾರ್ ಬೇಕಾರ್ ಗೆದ್ರೂ ಕ್ಷೇತ್ರಕ್ ಒಳ್ಳೇದ್ ಮಾಡುದನ್ನ, ಇಲ್ಲಿವರಿಗ್ ಮಾಡದ್ದನ್ನ ಮುಂದ್ವರ್ಸ್ಕಂಡ್ ಹೋಪುಕೆ ಇಬ್ರೂ ತಯಾರಿದ್ರು ಅಂಬುದ್ ಮಾತ್ರ ಸತ್ಯ. ಜನ್ರ್ ಯಾರಿಗ್ ಓಟ್ ಹಾಕಿರ್ ಅಂದೇಳಿ ಗೊತ್ತಾಪುಕೆ ಇಪ್ಪತ್ತೈದ್ನೆ ತಾರೀಕಿಗೆ ಪೆಟ್ಗಿ ಒಡುವರಿಗೆ ಗೊತ್ತಾತಿಲ್ಲ. ಅಲ್ಲಿವರಿಗೆ ಕುಂದಾಪ್ರದಗೆ…ಅವ್ರ್ ಗೆಲ್ತ್ರಾ ಇಲ್ಲ ಇವ್ರಾ ಬೆಟ್ ಕಟ್ಟುಕ್ ಬತ್ರ್ಯಾ ಅಂದೇಳಿ ಕೇಂತಾ ತಿರ್ಗುವರಿಗೇನು ತೊಂದ್ರಿ ಇಲ್ಲ.


ನಂಗಂತೂ ನಮ್ ಕುಂದಾಪ್ರ ಕನ್ನಡ ಕೇಂಡ್ರೆ ಅಷ್ಟಿಷ್ಟ್ ಖುಷಿ ಆಪುದಲ್ಲ ಗೊತ್ತಿತ?

ಅದ್ರಗೂ ಈಗ ಕೆಲ್ಸ ಮಾಡುಕ್ ಅಂತೆಳಿ ಊರ್ ಬಿಟ್ಟ್ ಬೆಂಗ್ಳೂರ್ ಸೇರ್ಕಂಡ್ ಮೇಲೆ ಯಾರೆ ಕುಂದಾಪ್ರದರ್ ಸಿಕ್ರೂ ಅವ್ರನ್ ಒಂದ್ಸಲ ಕುಂದಾಪ್ರ ಕನ್ನಡದಗೆ ಮಾತಾಡ್ಸ್‌ದಿದ್ರೆ ಸಮಾಧಾನವೇ ಆತಿಲ್ಲ. ಬೆಂಗ್ಳೂರಾಗಂತೂ ಬಿಡಿ ಆ ಭಾಷಿ ಈ ಭಾಷಿ ಅಂತೇಳಿ ಎಲ್ಲಾರೂ ಸೇರ್ಕಂಡ್ ಬೆಂಗ್ಳೂರ್ ಕನ್ನಡ ಅಂಬುದ್ ಒಳ್ಳೇ ಕಿಚಿಡಿ ಆದ್ ಕಂಡ್ಮೇಲೆ…ಇನ್ನೂ ಗಮಗಮ ಅಂತೆಳಿ ಪರಿಮಳ್ ಬಪ್ಪ ಕುಂದಗನ್ನಡ ಕೆಮಿ ಮೇಲೆ ಬಿದ್ರೆ ಆಪ್ ಖುಷಿ ಬಾಯ್ಮಾತಗೆ ಹೇಳುಕೆ ಆತಿಲ್ಯೇ..

 

ಕೆಲವ್ರೆಲ್ಲ ಇದ್ರ್ ಕಾಣಿ ಅವ್ರಿಗೆ ಕುಂದಾಪ್ರ ಕನ್ನಡದಗೆ ಮಾತಾಡುಕೆ ನಾಚ್ಕಿ ಆತ್ ಅಂಬ್ರ್. ಅಲ್ಲ ಈ ಬೇರೆ ಭಾಷಿಯರೆಲ್ಲ ಬಂದು ಅವ್ರವ್ರ ಭಾಷೆಯಗೆ ಮಾತಾಡುವತಿಗೆ ನಮ್ ಭಾಷಿ ಮಾತಾಡುಕೆ ನಮ್ಗೆ ಎಂತಕೆ ನಾಚ್ಕಿ ಆಯ್ಕ್ ನೀವೇ ಹೇಳಿ ಕಾಂಬ. ಅವ್ರಿಗೆಲ್ಲ ಆಗ ಇದೇ ಕುಂದಾಪ್ರ ಕನ್ನಡದಗೆ ಎಲಿಮೆಂಟ್ರಿ ಕಲ್ತದ್, ಇದೇ ಕುಂದಾಪ್ರ ಕನ್ನಡದಗೆ ಹೈಸ್ಕೂಲಗೆ ಪಾಠ ಕೇಂಡದ್ ಎಲ್ಲ ನೆನಪೇ ಹೋಯಿತ್ತಾ ಹಂಗಾರೆ? ಒಂದ್ನಾಕ್ ವರ್ಷ ಊರ್ ಬಿಟ್ರ್ ಕೂಡ್ಳೇ ಟುಸ್ ಪುಸ್ ಅಂದೇಳಿ ಇಂಗ್ಲೀಷ್ ಹಾರ್ಸುಕೆ ಕಲ್ತ್ ಕೂಡ್ಲೇ ಹುಟ್ಟಿನ ಲಾಗಾಯ್ತೂ ಆಡ್ಕಂಡ್ ಬಂದ ಭಾಷಿ ನೆನ್ಪ್ ಹೋತ್ ಅಂತಾರೆ ನಾಳಿಗ್ ಇವ್ರ್ ದೊಡ್ ಮನ್‌ಷ್ರು ಅನ್ಸ್ಕಂಬತಿಗೆ ಹೆತ್ ಅಪ್ಪ ಅಮ್ಮನ್ ನೆನ್ಪ್ ಆರು ಇರತ್ ಅಂದೇಳಿ ಏನ್ ಗ್ಯಾರಂಟಿ ಮಾರಾಯ್ರೆ…?

 

ಅದೆಲ್ಲ ಇರ್ಲಿ ಬಿಡಿ… ಇನ್ಮೇಲೆ ಪುರ್ಸೊತ್ತ್ ಸಿಕ್ದಾಗ್ಳಿಕೆಲ್ಲ ಕುಂದಾಪ್ರ ಕನ್ನಡದಗೆ ಎಂತಾರು ಒಂದಿಷ್ಟ್ ಬರುವ ಅಂದೇಳಿ ಮಾಡಿದ್ನೇ… ಓದಿ. ಲಾಯ್ಕ್ ಇದ್ರೆ ನಂಗೆ ಒಂದ್ಮಾತ್ ಹೇಳಿ…

 

ಒಂದ್ ಮಾತ್ ಮಾತ್ರ ನಾವೆಲ್ಲ ನೆನ್ಪಿಟ್ಕಣ್ಕಾದ್ ಅಂದ್ರೆ… ನೀವ್ ಯಾವ್ ಭಾಷಿ ಬೇಕಾರು ಕಲಿನಿ, ಎಲ್ಲಿಗ್ ಬೇಕಾರೂ ಹೋಯ್ನಿ ಆರೆ ನಮ್ ಭಾಷಿ, ಊರನ್ ಮಾತ್ರ ನೆನ್ಪ್ ಬಿಡ್ದಿದ್ರ್ ಸೈ.

 

ಹುಟ್ಟ್ರೆ ಕುಂದಾಪ್ರದಗೆ ಹುಟ್ಕ್

ಆಡ್ದ್ರೆ ಕುಂದಾಪ್ರ ಕನ್ನಡದಗೆ ಮಾತಾಡ್ಕ್,

ಬದ್ಕಿದ್ ಎತ್ತಿನ ಗಾಡಿ,

ಇದು ವಿಧಿ ಒಡ್ಸುವ ಗಾಡಿ….

ನನ್ ಮಾತ್ನ ನೀವ್ ಮರಿ ಬೇಡಿ…

ಕುಂದಾಪ್ರ ಕನ್ನಡವ ನೀವ್ ಮಾತಾಡಿ