Archive for ಡಿಸೆಂಬರ್, 2009


ಬರೀ ಕುಂದಾಪ್ರ ಕನ್ನಡದಗೆ ಮಾತ್ರ ಎಂತಕೆ , ಈಗ ಯಾವ್ ಕನ್ನಡದಗೂ ಇಪ್ಪುದ್ ಇಂಗ್ಲೀಷೆ ಅಲ್ದಾ. ಯಾರಾರೂ ಶುದ್ಧ ಕನ್ನಡ ಮಾತಾಡುವರ್ ಇದ್ರೆ ಹುಡ್ಕಿ ಕೊಡಿನಿ ಕಾಂಬ ಹಂಗಾರೆ  ಅಂದೇಳಿ  ನೀವ್ ಕೆಂಬ್ಕೂ ಸಾಕ್.  ಅದ್ರಗೂ ಬೆಂಗಳೂರಗೆ ಹಾಂಗಿನರ್ ಯಾರಾರೂ ಇದ್ರೆ ಅವ್ರಿಗೆ ರಾಜ್ಯೋತ್ಸವ ಪ್ರಶಸ್ತಿಯೇ ಕೊಡ್ಲಕ್ಕ್ ಅಂತ್ ನೀವ್ ಹೇಳುಕೂ ಸಾಕ್.  ಆರೇ ನಾ ಹೇಳುಕ್ ಹೊರಟದ್ದ್ ಅದ್ ಅಲ್ದೆ… ಒಂದ್ ಇಂಗ್ಲಿಷ್ ಶಬ್ದ ಕುಂದಾಪ್ರ ಕನ್ನಡದೊಳಗೆ ಬಂದ್ ಕೂಕಂಡಿತ್.

ಆ ಶಬ್ದ ಯಾವ್ದ್ ಅಂದೇಳಿ ನೆನ್ಪ್ ಮಾಡ್ಕಂಕಿದ್ರೆ ಸಣ್ಣಕಿಪ್ಪತ್ತಿಗೆ ಆಟ ಆಡುವತಿಗೆ ಯಾರಾರೂ ಮೋಸ ಮಾಡ್ರೆ ಎಂಥ ಹೇಳ್ತಿತ್ತ್ ಅಂತ್  ಒಂಚೂರ್ ನೆನ್ಪ್ ಮಾಡ್ಕಣಿ ಕಾಂಬ.  ನೆನ್ಪ್ ಆಯೇ ಇರ್ಕ್ ಅಲ್ದಾ?

ಇನ್ನೂ ನೆನ್ಪ್ ಆಯ್ಲಿಲ್ಯ? ಹಂಗಾರೆ ಮುಂದ್ ಓದಿ ಕಾಣಿ… ಆಗ್ಳಿಕಾರು ನೆನ್ಪ್ ಆತ್ತ್ …

“ಅವನೊಟ್ಟಿಗೆ ಆಡುಕ್ ಹೋಪ್ಕೆ ಆಗ. ಅವಂದ್ ಬರೀ ಹಂಬಕ್ ಮಾರಾಯ ”

“ನೀ ಗೆದ್ದಿಪ್ಕು ಸಾಕ್. ನಿನ್ ಕಣಗೆ  ಹಂಬಕ್ ಮಾಡಿರೆ ನಾನೂ ಗೆಲ್ತಿದ್ದೆ ಗೊತ್ತ?”

” ಬೋಲ್ ಕಾಲಿಗೆ ತಾಗಲೇ ಇಲ್ಲ. ಆರು ಅಂಪೈರ್ ಔಟ್ ಕೊಟ್ಟ ಮಾರಾಯ. ಬರೀ ಹಂಬಕಾಟ”

ಹಾ.. ಈಗ ಗೊತ್ತಾಯ್ತಲ್ದಾ? ನಾ ಎಂತ ಹೇಳುಕೆ ಹೊರ್ಟಿದೆ ಅಂತ. ಅದೇ ಹಂಬಕ್… ಹಂಬಕ್..

“ಮೋಸ ಮಾಡುದ್” ಅಂತ್ ಹೇಳುಕೆ ನಮ್ಮ ಕುಂದಾಪ್ರ ಕನ್ನಡದಗೆ ಇಪ್ಪ ಶಬ್ದ…

ಆರೇ ಈ ಶಬ್ದ ಬಂದದ್ದ್ ಎಲ್ಲಿಂದ ಅಂದೇಳಿ ನಂಗಂತೂ ಗೊತ್ತಿರ್ಲಿಲ್ಲ. ಮೊನ್ನೆ ಒಂದ್ ಪುಸ್ತಕ ಓದ್ತಾ ಇದ್ದೆ. ಅದ್ರಗೆ

ಒಂದ್ ಇಂಗ್ಲೀಶ್ ಶಬ್ದ ಇದ್ದಿತ್. ಅದನ್ನ್ ಕಂಡ್ರ ಕೂಡ್ಲೇ ಫಕ್ನೆ ನೆನ್ಪಾಯ್ತ್.. ಹೋ ಈದ್ ಅದೇ …

ಆ ಶಬ್ದ ಹಂಬಗ್  (humbug) . ಹಾಂಗಂದ್ರೆ ಮೋಸ , ಅಪ್ರಾಮಾಣಿಕತೆ, ವಂಚನೆ, ಮೋಸಗಾರ ಅಂತೆಲ್ಲ ಅರ್ಥ ಸಿಕ್ಕತ್ತ್.

ಬೇಕಾರೆ  http://www.baraha.com/kannada/index.php ಇಲ್ಲಿಗ್ ಹೋಯಿ humbug  ಅಂತ ಬರ್ದ್ ಹುಡ್ಕಿ ಕಾಣಿ.

ಶಬ್ದ ಬೇಕಾರೆ ಇಂಗ್ಲಿಶಿದೆ ಆಯ್ಲಿ…ಅದನ್ನ್ ಸತೆ ನಮ್ಮ ಕುಂದಾಪ್ರ ಕನ್ನಡಕ್ ತಕಂಡ್ ಬಂದ್ ‘ಹಂಬಕ್’ ಅಂತ ಮಾಡಿ ಅದೀಗ ನಮ್ದೆ ಶಬ್ದ ಆಯ್ತಲ್ದ..

ನಿಮ್ಗೆಲ್ಲ ಮೊದ್ಲೇ ಗೊತ್ತಿದ್ದಿತೋ ಏನೋ. ನಂಗಂತೂ ಗೊತ್ತಿರಲ್ಲ,.. ನನ್ಕಣಗೆ ಗೊತ್ತಿಲ್ದಿದ್ದರ್ ಯಾರಾರೂ ಇದ್ರೆ ಅವ್ರಿಗ್ ಗೊತ್ತಾಯ್ಲಿ ಅಂದೇಳಿ ಇಲ್ಲೊಂಚೂರ್ ಬರ್ದ್ ಹಾಕ್ದೆ ಕಾಣಿ.. ನಿಮ್ಗೂ ಯಾವ್ದಾರೂ ಹೀಂಗಿದೆ ಶಬ್ದ ಗೊತ್ತಿದ್ರೆ ಹೇಳಿ… ನನ್ನಂತವ್ರಿಗೆ ಉಪ್ಕಾರ ಆತ್ತ್.. ಹೇಳ್ತ್ರಿ ಅಲ್ದಾ?


ಮತ್ತೆ ಎಲ್ಲ ಹ್ಯಾಂಗಿದ್ರಿ? ಊರಗ್ ಮೊನ್ನೆ ಮತ್ತ್ ಮಳಿ ಬಂದಿತಂಬ್ರಲೆ… ನಿಮ್ದ್ ಕೊಯ್ಲ್ ಎಲ್ಲಾ ಆಯ್ತ್ ಕಾಣತ್ ಅಲ್ದಾ? ಹ್ಯಾಂಗೆ ಈ ವರ್ಷ ಬ್ಯಾಸಾಯ ಅಡ್ಡಿಲ್ಲ್ಯಾ? ಪೆರ್ಡೂರ್, ಸಾಲಿಗ್ರಾಮದರದ್ ತಿರ್ಗಾಟ ಶುರು ಆಯಿರ್ಕ್ ಅಲ್ದಾ?

 ಆಟ ಗೀಟ ಕಾಂಬ್ಕ್ ಹೋಯಿಲ್ಲ್ಯಾ? ಈಗೀಗ ಆಟ ಕಾಂಬ್ಕ್ ಹೋಪ್ಕೇ ಮನ್ಸ್ ಬತ್ತಿಲ್ಲಪ. ಎಲ್ಲಾ ಪಿಚ್ಚರಿದೇ ಕತಿ ಮಾಡುದಾರೆ ಆಟ ಎಂತಕ್ ಕಾಣ್ಕ್ ರಾತ್ರಿಡೀ ನಿದ್ರಿ ಬಿಟ್ಕ್ಂಡ್. ಪಿಚ್ಚರೇ ಕಾಣ್ಲಕ್. ಆರೂ ಒಂದ್ ಅಂದ್ರೆ ಬೆಂಗ್ಳೂರಗೆ ಬಂದಲ್ಲ್ ಈ ಸರ್ತಿ ಎಲ್ಲಾ ಮ್ಯಾಳದರೂ ಹೆಚ್ಚ್ ಪೌರಾಣಿಕ ಪ್ರಸಂಗವೇ ಆಡಿರ್. ನಾನೂ ಒಂಡೆರ್ಡ್ ಆಟ ಕಂಡಿನೆ. ಮ್ಯಾಳದರ್ ಹೇಳುದ್ ಎಂತ ಅಂದ್ರೆ ಹೊಸ ಪ್ರಸಂಗ ಆಡ್ರ್ ಮಾತ್ರ ಜನ ಬತ್ರೆ. ಹಳ್ತೆಲ್ಲಾ ಯಾರಿಗೂ ಬ್ಯಾಡ. ಜನ ಬರ್ದಿರೆ ನಾವ್ ಮ್ಯಾಳ ನೆಡ್ಸುದಾರೂ ಹ್ಯಾಂಗೆ ಅಂದೇಳಿ. ಅವ್ರ್ ಹೇಳುದ್ರಗೂ ಸತ್ಯ ಇಲ್ದೇ ಇಲ್ಲ. ಆರೂ ಇದ್ ಕತಿ ಹ್ಯಾಂಗಾಯ್ತ್ ಗೊತ್ತಾ, ೨೦-೨೦ ಬಂದ್ಮೇಲೆ ಟೆಸ್ಟ್ ಮ್ಯಾಚ್ ಕಾಂಬುಕೆ ಯಾರೂ ಬತ್ತಿಲ್ಲ ಅಂದೇಳ್ದಾಂಗ್ ಆಯ್ತ್. ಇದ್ ಪೂರ್ತಿ ಸತ್ಯವೂ ಅಲ್ಲ. ಹಾಂಗಂದೇಳಿ ತೀರಾ ಸುಳ್ಳ್ ಅಂದೇಳಿಯೂ ಹೇಳುಕಾತಿಲ್ಲೆ. ಈಗ ಬೆಂಗ್ಳೂರಗಾರೆ ನಾನೆ ಕಂಡಾಂಗೆ ಪೌರಾಣಿಕ ಪ್ರಸಂಗ ಆಡದಾಗ್ಳಿಕೆ ಯಾವತ್ತೂ ಜನ ಇಲ್ಲ ಅಂದೇಳಿ ಆಯಿಲ್ಲ. ಪ್ರತೀ ವರ್ಷ ದೇವಿ ಮಹಾತ್ಮೆ ಆಡ್ರೂ ಜನ ಭರ್ತಿಯಾದ್ದ್ ನಾನೇ ಕಂಡಿದೆ. ಆರೆ ಬೆಂಗ್ಳೂರಗೆ ಬಂದಾಂಗೆ ಊರಗ್ ಜನ ಪೌರಾಣಿಕ ಪ್ರಸಂಗಕ್ಕ್ ಬತ್ರಾ? ಯಾಕ್ ಬತ್ತಿಲ್ಲ ಹೇಳಿ… ಒಂದ್ ಒಳ್ಳೇ ಹತ್ತ್ ಪ್ರಸಂಗ ತಯಾರ್ ಮಾಡ್ಕಂಡ್, ಹೊಸ ಪ್ರಸಂಗದ ಸೆಟ್ಟಿಂಗಿಗೆ ಕರ್ಚ್ ಮಾಡು ದುಡ್ಡನ್ನ ಕಲಾವಿದ್ರಿಗೆ ಕೊಟ್ಟ್, ಒಳ್ಳೋಳ್ಳೇ ಕಲಾವಿದ್ರನ್ ಹಾಯ್ಕಂಡ್ ಹೊಡಿ ಹಾರ್ಸರೆ  ಎರ್ಡ್ ದಿನ ಬರ್ದಿರೂ ಕಡಿಗೆ ಆಟ ಕಂಡರ್ ಮಾತಾಡತ್ ಕೇಂಡ್ ಆರೂ ಕಾಂಬ ಹ್ಯಾಂಗಿತ್ತ್ ಅಂದೇಳಿ ಬಂದೇ ಬತ್ರೆ. ಜನ್ರಿಗೆ ಎಂತ ಗೊತ್ತಾ.. ಒಟ್ಟಾರ್ ಮೇಲ್ ಆಟ ರೈಸ್ಕ್.. ಆರೆ ಇದ ಸ್ವಲ್ಪ ಕಷ್ಟದ ಕೆಲ್ಸ. ಈಗ ಮ್ಯಾಳದರಿಗೆ ಹ್ಯಾಂಗಂದ್ರೆ… ಯಕ್ಷಗಾನ ಉಳೀಕ್ ಅಂದೇಳಿ ಇಲ್ಲ… ಒಟ್ಟಾರ್ ಮೇಲ್ ಅವ್ರ್ ಪೆಟ್ಗಿ ತುಂಬುಕ್ ಸುಲ್ಭದ್ ದಾರಿ ಆರ್ ಸಾಕ್. ಇದ್ ಹೀಂಗೆ ಮುಂದ್ ಹೋರೆ.. ಇನ್ನ್ ಮೇಲೆ ಆಟದಗೆ ನೀವ್ ಐಟಮ್ ಸಾಂಗ್ ಕಾಂಬ್ ದಿನವೂ ದೂರ ಇಲ್ಲ ಅನ್ಸತ್ತ್…

 ನಂಗೆ ಸಣ್ಣಕಿಪ್ಪತ್ತಿಗೆ ಅಷ್ಟೇನ್ ಆಟ ಕಾಂಬ್ ಗಿರ ಇರ್ಲಿಲ್ಲ. ಆಟ ಹೆಚ್ಚ್ ಕಾಂಬುಕೆ ಶುರು ಮಾಡದ್ದ್ ಬೆಂಗ್ಳೂರಿಗೆ ಬಂದ್ ಮೇಲೆ. ಊರಗಿದ್ದಾಗ್ಳಿಕೆ ವರ್ಷಕ್ ಒಂದ್ ತಪ್ರೆ ಎರ್ಡ್ ಟೆಂಟ್ ಮ್ಯಾಳದ ಆಟ. ಅದೂ ಚಕ್ರಮೈದಾನದಗೆ ಆರೆ ಮಾತ್ರ. ಆಗ ಹೆಚ್ಚ್ ಸಾಲಿಗ್ರಾಮ ಮ್ಯಾಳದ ಆಟ ಕಂಡದ್ದೇ ಹೆಚ್ಚ್. ನಂಗ್ ನೆನ್ಪ್ ಇಪ್ಪಾಂಗೆ ಮೇಘ ಮಯೂರಿ, ಶೃಂಗ ಸಾರಂಗ, ಧರ್ಮ ಸಂಕ್ರಾಂತಿ…ಶಿರ್ಸಿ ಮ್ಯಾಳದರದ್ದ್ ಭಾಗ್ಯ ಭಾರತಿ… ಹೀಂಗೆ ಸುಮಾರ್ ಆಟ ಕಂಡಿದೆ. ಅದ್ರಗೂ ಮೇಘ ಮಯೂರಿ ಮತ್ತ್ ಭಾಗ್ಯ ಭಾರತಿ ಆಗ್ಳಿಕೆ ಭಾರಿ ರೈಸಿತ್… ಮೇಘ ಮಯೂರಿ ಕತಿಯಗೆ ಬಪ್ಪ್ ಕೃಷಿಕ ಕಾಳನ ಕತಿಯೇ ಕಡಿಗೆ ‘ಹುಲಿಯಾದ ಕಾಳ’ ಕ್ಯಾಸೆಟ್ ಬಂದ್ ಭಾರಿ ಹೆಸ್ರ್ ಮಾಡಿತ್. ಆ ಕಾಳನ ಕತಿ ಸುಮಾರ್ ಮೊದ್ಲ್ ನನ್ ಬ್ಲಾಗಗೂ ಹಾಕಿದ್ದೆ… ಹೀಂಗೆ ವರ್ಷಕ್ ಒಂದೋ ಎರ್ಡ್ ಟೆಂಟಿನಾಟ ಬಿಟ್ರೆ ಮತ್ತ್ ಹರ್ಕಿ ಬಯಲಾಟ. ಮನಿ ಬುಡ್ದಲ್ಲೇ ಆಟ ಆರೆ ಆಟಕ್ ಹೋಪ್ದ್ ಅಂದೇಳಿ ಬೇಗ್ ಬೇಗ್ ಉಂಡಾಂಗ್ ಮಾಡಿ, ಎಲ್ಲರ್ಕಿಂತ ಮುಂದ್ ಹೋಯಿ ಕೂಕಂಡ್, ಕ್ವಾಡಂಗಿ, ಬಾಲಗೋಪಾಲ, ಶ್ರೀವೇಷ(ಇದ್ ಶ್ತ್ರೀವೇಷ ಆರೂ ಯಾರೂ ಹಾಂಗ್ ಹೇಳತ್ ಇಲ್ಲಿವರಿಗೂ ನಾನ್ ಕೇಣಲ್ಲಪ್ಪ) ಎಲ್ಲ ಕಂಡ್ ಇನ್ನೇನ್ ಒಡ್ಡೋಲ್ಗ ಶುರು ಆಪಲ್ಲೊರಿಗೆ ಒಂದ್ ಗಳ್ಗಿ ಆಟ ಕಂಡಾಂಗ್ ಮಾಡಿ ಆಟದ ಗರದಗೆ ಸುತ್ತ್ ಹೊಡುಕ್ ಹೋರೆ, ಆಟದ ಖರ್ಚಿಗೆ ಕಿಸಿಯೊಳ್ಗೆ ಇಟ್ಕಂಡ್ ಚಿಲ್ರಿ ಪೂರ್ತಿ ಕಾಲಿ ಆಪಲ್ಲೊರಿಗೆ ಮತ್ತ್ ಆಟದ ಬದಿಗೆ ಮುಖ ಹಾಕಿ ಕಾಂಬರ್ಯಾರ್? ಅದೆಲ್ಲಾ ಆಪಷ್ಟೊತ್ತಿಗೆ ಹ್ಯಾಂಗೂ ಕಣ್ಣ್ ಕೂರ್‌ತಿರತ್ತ್… ಆಟಕ್ಕ್ ಹೋಯ್ಕ್ ಅಂದೇಳಿ ಮಧ್ಯಾಹ್ನ ಮನ್ಕೋ ಅಂದೇಳಿ ಮನ್ಯರ್ ಒತ್ತಾಯಕ್ಕೆ ಕಣ್ಣ್ ಮುಚ್ದಾಂಗ್ ಮಾಡಿ ಅವ್ರಿಗೆಲ್ಲ ನಿದ್ರಿ ಬಂತ್ ಅಂದೇಳಿ ಗೊತ್ತಾರ್ಕೂಡ್ಲೇ ಹಗೂರ ಎದ್ದ್ ಆಡುಕೆ ಹೋದ್ದಲ್ದಾ? ಕಣ್ನ್ ಕೂರ್ದೇ ಎಲ್ಲಿಗ್ ಹೋತ್ತ್. ಮನಿಗ್ ಹೋಯ್ ಮಲ್ಕಂಡ್ರೂ ಆಯ್ತ್. ಇಲ್ದಿರೆ ಅಲ್ಲೇ ಎಲ್ಲಾರೂ ಒಂದ್ ಮುಲ್ಲಿ ಹಿಡ್ಕಂದ್ ಬಿದ್ಕಂಡ್ರೂ ಆಯ್ತ್. ಮತ್ತ್ ಆಟ ಕಾಣ್ಕಿದ್ರೆ ರಾಕ್ಷಸನ ವೇಷ ಬರ್ಕ್. ಅದ್ ಬಪ್ಪತಿಗೆ ಹ್ಯಾಂಗಿದ್ರೂ ಬೆಳ್ಗಿನ ಜಾಮ ಆಯಿರತ್ತ್. ಹಾಂಗಾಯಿ. ಅದನ್ನ್ ಒಂದ್ ಕಂಡ್ರೆ ಅಲ್ಲಿಗ್ ನಮ್ಮ್ ಆಟ ಮುಗ್ದಾಂಗೆ… ಆಟದ ಗರದಗೆ ರಾತ್ರಿಡೀ ನಿದ್ರಿ ಮಾಡ್ರೂ.. ಆಟದ ನಿದ್ರಿ ಅಂದೇಳಿ ಮಾರ್ನೆ ದಿನ ಶಾಲಿಗ್ ಹಾಂಟ್ ಬೇರೆ… ಆರೂ ಆಗ ಆಟಕ್ ಹೋಯಿ ಬಪ್ದಂದ್ರೆ ಸಣ್ಣಕೆ ಒಂದ್ ಹಬ್ಬಕ್ ಹೊಯಿ ಬಂದಷ್ಟೇ ಖುಶಿ… ಈಗ ಆಗ್ಳಿಕಿನ ನಮನಿ ಆಟವೂ ಇಲ್ಲ… ಇದ್ರೂ ಆ ಖುಷಿ ಖಂದಿತ ಬತ್ತಿಲ್ಲ… ಹಳ್ತ್ ಹೋಯಿ ಹೊಸ್ತ್ ಬಂದಾಂಗೆ… ಎಲ್ಲ ಬದ್ಲಾಯ್ಕೇ ಅಲ್ದಾ? ನಾಳಿಗೆ ಇದೂ ಹಳ್ತಾಯಿ ಮತ್ತ್ ಹೊಸ್ತ್ ಬರ್ಕೇ ಅಲ್ದಾ …. ಅಂದೇಳಿ ಹೇಳ್ತಾ ಈ ಆಟದ ಪುರಾಣಕ್ಕೆ… ಮಂಗಳ ಹಾಡ್ತೆ.