Archive for ಮಾರ್ಚ್, 2009


ಕಳ್ದ್ ತಿಂಗ್ಳ್ ನನ್ ಬ್ಲಾಗ್ ಬದಿಗೆ ಶ್ರೀಕಾಂತ ಹೆಗಡೆ ಅಂದೇಳಿ ಒಬ್ರ್ ಬಂದಿರ್. ಅವ್ರ್ ಒಂದೆರ್ಡ್ ಕಮೆಂಟ್ ಪೋಸ್ಟ್ ಮಾಡಿರ್… ಆ ಕಮೆಂಟಗೆ ಒಂದೆರ್ಡ್ ಪ್ರಶ್ನೆ ಸತೇ ಕೇಂಡಿರ್. ಅವ್ರ್ ಕೇಂಡದ್ ಇಷ್ಟೆ…ನೀವ್ ಕುಂದಾಪ್ರದರು ಪ್ಯಾಟಿಗ್ ಬಂದ್ ಸೆಟ್ಲ ಆದೋರು ನಿಮ್ಮ ಮಕ್ಕಳಿಗೆ ಅಲ್ಲಿ ಭಾಷಿ, ಸಂಸ್ಕೃತಿ ಕೊಡುಕೆ ಮರ್ತರಲ್ಲೇ ಮಾರಾಯ್ರೆ, ಇದ್ನ ಕಂಡ್ರೆ ಕೇಂಡ್ರ ಭಾಳ ಭೇಜಾರಾತ್ತಲೆ. ನೀವ್ ಕುಂದಾಪ್ರದ ಜನ ಎಂಥಕ್ಕೆ ಮಕ್ಳ ಮರಿಗೆ ನಿಂ ಕುಂದಗನ್ನಡ ಕಲಸೂದಿಲ್ಲ ? ಅವ್ರ್ ಪ್ರಶ್ನೆಗೆ ಉತ್ರ ಕೊಡುವ ಅಂದ್ರೆ… ನಂಗ್ ಮದಿಯೇ ಆಯಿಲ್ಲ ಇನ್ನ್ ಮಕ್ಳಿಗೆ ಕಲ್ಸುದ್ ಎಲ್ಲ್ ಬಂತ್. ಆರೂ ಅವ್ರ್ ಕೇಂಡದ್ ಪ್ರಶ್ನೆಗೆ ನೀವೆಲ್ಲ ಎಂತ ಹೇಳ್ತ್ರಿ ಕಾಂಬ ಅಂದೇಳಿ ಇದನ್ನ್ ಬರುಕೆ ಹೊರ್ಟದ್ದ್..

 

ಕುಂದಾಪ್ರ ಬದ್ಯರ್ ಕೆಲ್ಸಕ್ಕಂದೇಳಿಯೋ, ಯಾಪಾರ ಮಾಡುಕಂದೇಳಿಯೋ ಪರವೂರಿಗೆ ಹೋದ್ರೂ ಸೈತ, ನಾನ್ ಕಂಡ್ ಮಟ್ಟಿಗೆ ಹೇಳುದಾರೆ, ಅವ್ರವ್ರ್ ಮಟ್ಟಿಗೆ ಮನ್ಯಗೆ ಕುಂದಾಪ್ರ ಕನ್ನಡದಗೇ ಮಾತಾಡ್ತ್ರ್. ಹಾಂಗಂದೇಳಿ ಇದು ನೂರಕ್ಕ್ ನೂರ್ ಸತ್ಯ ಅಂದೇಳಿ ಹೇಳುಕ್ ಬತ್ತಿಲ್ಲ… ಈಗ ಊರ್ ಬಿಟ್ಟ್ ಸುಮಾರ್ ವರ್ಷ ಆಯಿ ಪರವೂರಗೇ ಖಾಯಂ ಆಯಿ ಬಿಡಾದ ಮಾಡ್ದರ್ ಇದ್ರೆ, ಅವ್ರ ಮಕ್ಳ್ ಅಲ್ಲೇ ಹುಟ್ಟಿ ಬೆಳದ್ದಿದ್ರೆ, ಸುತ್ತ ಮುತ್ತ ಇಪ್ಪರ್ ಎಂತ ಭಾಷಿ ಮಾತಾಡ್ತ್ರೋ ಅದೇ ಭಾಷಿಯಗೇ ದೋಸ್ತಿಗಳ್ ಹತ್ರ, ಶಾಲ್ಯಗೆ ಮಾತಾಡುದ್ರಗೆ ಎಂತ ವಿಚಿತ್ರವೂ ಕಾಂತಿಲ್ಲ. ಆರೆ ಮನ್ಯಗ್ ಮಾತ್ರ ಕುಂದಾಪ್ರ ಕನ್ನಡದಗೇ ಮಾತಾಡ್ತ್ರ್. ಅದೂ ಅಲ್ದೇ ನಾವ್ ಒಂದ್ ಜಾಗದಗೇ ಸುಮಾರ್ ವರ್ಷ ಇದ್ರೆ, ನಮ್ ಬದಿ ಭಾಷಿ ಮಾತುಡವರ್ ನಮ್ ಸುತ್‌ಮುತ್ತ ಇಲ್ದಿದ್ರೆ, ಬ್ಯಾಡ ಅಂದ್ರೂ ಒಂಚೂರಾರೂ ಅವ್ರ್ ಮಾತಾಡು ಭಾಷಿ ನಮ್ಗೇ ಗೊತಿಲ್ದಾಂಗೇ ನಮ್ ಮಾತಗೆ ಬತ್ತ್. ಹಾಂಗಾಯಿ ಕುಂದಪ್ರದರ್ ಅವ್ರವ್ರ್ ಮಕ್ಳಿಗೆ ಅವ್ರ್ ಸಂಸ್ಕೃತಿ ಭಾಷಿ ಕಲ್ಸುದಿಲ್ಲ ಅಂತ ಹೇಳ್ರೆ ನಾನಂತೊ ಒಪ್ಪುಕ್ ತಯಾರಿಲ್ಲ.

 

ಅವ್ರ ಹೇಳ್ದಾಂಗಿನರ್ ಇರ್ತ್ರ್, ಇಲ್ಲ ಅಂದೇಳಿ ಅಲ್ಲ. ಅವ್ರಿಗೆ ಕುಂದಾಪ್ರ ಕನ್ನಡ ಅಂದೇಳ್ರ್ ಏನ್, ಕನ್ನಡ ಮಾತಾಡುಕೇ ನಾಚ್ಕಿ ಆಪುಕೂ ಸಾಕ್. ಹಾಂಗಿನರ್ ಬಗ್ ಬ್ಲಾಗ್ ಶುರು ಮಾಡದ್ ಸುರಿಗೆ ನಾನೇ ಒಂದ್ ಪೋಸ್ಟ್ ಮಾಡಿದ್ದೆ.  ಒಂದ್ ನಾಲ್ಕಕ್ಷರ ಟುಸ್-ಪುಸ್ ಅಂಬುಕ್ ಕಲ್ತ್ ಮೇಲೆ ನಮ್ ಭಾಷಿ ಮಾತಾಡುಕೆ ಅವ್ರ್ ಭರಾಮಿಗ್ ಕಮ್ಮಿ ಆತ್ತ್. ಇಂಗ್ಲಿಷ್ ಮಾತಾಡುದೇ ಒಂದ್ ಜಾಪ್ ಅಂದೇಳಿ ಅವ್ರ್ ಲೆಕ್ಕ. ನಮ್ ಕೆಲ್ಸಕ್ಕೋ ಮತ್ತೊಂದಕ್ಕೋ ಎಷ್ಟ್ ಬೇಕೋ ಅಷ್ಟ್ ಮಾತಾಡಿ, ನಮ್ಮವ್ರ್ ಹತ್ರ ಮಾತಾಡುವತಿಗೆ ನಮ್ಮ್ ಭಾಷಿ ಮಾತಾಡ್ರೆ ಇವ್ರ ಗಂಟ್ ಎಂತ ಹೋತ್ತೋ ನಂಗಂತೂ ಗೊತಿಲ್ಲ. ಹೀಂಗಿನರ್ ಇಲ್ದೇ ಇಲ್ಲ ಕುಂದಾಪ್ರ ಬದ್ಯಗೆ ಅಂದೇಳಿ ಹೇಳುಕಾತಿಲ್ಲ. ಆರ್ ನಂಗ್ ಗೊತ್ತಿದ್ದ್ ಮಟಿಗೆ ಅಂತರ್ ಮಸ್ತ್ ಜನ ಇಲ್ಲ. ನೀವ್ ಎಂತ್ ಅಂತ್ರಿ…?

 

ನಮ್ ಭಾಷಿ ಮಾತಾಡುಕೆ ಹುಣ್ಸಿಹಣ್ ಮಾಡ್ವರನ್ ಕಂಡ್ರ್ ಕೂಡ್ಲೇ ಒಂದ್ ಕತಿ ನೆನ್ಪ್ ಆತ್ತ್ ಕಾಣಿ. ಇದು ಎಲ್ಲೋ ಓದದ್ದೋ ಯಾರೋ ಹೇಳದ್ದೋ ನೆನ್ಪ್ ಆತಿಲ್ಲ. ಆರೆ ಕತಿ ಭಾರಿ ಗಮ್ಮತಿತ್ತ್. ಕುಂದಾಪ್ರ ಬದಿಯಳ್ ಒಬ್ಳ್ ಫಾರಿನ್ನಿಗ್ ಮದಿ ಆಯಿ ಹೋದ್ಲಂಬ್ರ್. ಮದಿ ಆಯಿ ಒಂದ್ ವರ್ಷ ಆರ್ ಮೇಲೆ ಮೊದಲ್ನೇ ಹೆರ್ಗಿಗೆ ಅಂದೇಳಿ ಅವ್ಳ್ ಗಂಡ ಅವ್ಳನ್ ಊರಿಗ್ ಬಿಟ್ಟ್ ಹೋದ ಅಂಬ್ರ್. ಅವ್ಳ್ ಅಮ್ಮ ಅವ್ಳನ್ ಕರ್ಕಂಡ್ ಡಾಕ್ಟ್ರ ಹತ್ರ ಕರ್ಕಂಡ್ ಹೋರ್. ಡಾಕ್ಟ್ರೂ ಕುಂದಾಪ್ರ ಬದಿಯರೇ… ಆರೂ ಇವ್ಳ್ ಫಾರಿನ್ನಿಂದ ಬಂದದ್ದಲ್ದಾ ಅದನ್ನ್ ತೋರ್ಸ್ಕಂದೇಳಿ ಇವ್ಳ್ ಡಾಕ್ಟ್ರತ್ರ ರೀ ಟುಸ್ಪುಸ್ ಅಂದೇಳಿ ಬಟ್ಲರ್ ಇಂಗ್ಲೀಷ್ಗೇ ಮಾತುಡುದಂಬ್ರ್ಅವ್ಳ್ ಮಾತಾಡ್ತಿದ್ದ ತಪ್ ತಪ್ ಇಂಗ್ಲೀಷ್ ಕೇಂಡ್, ಡಾಕ್ಟ್ರಿಗೂ ಒಳ್ಗೊಳ್ಗೇ ತಡ್ಕಂಬ್ಕೆ ಆಗ್ದಿದ್ದಷ್ಟ್ ನೆಗಿ ಬತಿತ್ತ್ಆರೂ ಕಷ್ಟ್ ಪಟ್ಟ್ ನೆಗಿ ತಡ್ಕಂಡ್ ಇದ್ರ್. ಆಯ್ತ್, ಅವ್ಳನ್ನ ಪರೀಕ್ಷೆ ಮಾಡಿ ಮಾತ್ರಿ, ಔಷಿದ್ಧಿ ಎಲ್ಲ ಕೊಟ್ಟ್, ಹದ್ನೈದ್ ದಿನ ಬಿಟ್ಟ್ ಆಸ್ಪತ್ರಿಗ್ ಬಂದ್ ಸೇರುಕ್ ಹೇಳ್ರಂಬ್ರ್. ಸರಿ ಹದ್ನೈದ್ ದಿನ ಹೋಯ್ತ್, ಅವ್ಳನ್ ಆಸ್ಪತ್ರಿಗೆ ಸೇರ್ಸ್ರ್, ಆಗ್ಳಿಕೂ ಅವ್ಳ್ ಮಾತ್ ಪೂರಾ ಬಟ್ಲರ್ ಇಂಗ್ಲೀಷೇ..  ಎಲ್ಲಿವgಗ್ ಅಂದ್ರ್ ಗುಡ್ಸಿ ಒರ್ಸುಕೆ ಬಪ್ಪರ್ ಹತ್ರವೂ ಇಂಗ್ಲೀಶೇ… ಸರಿ ಇನ್ನೇನ್ ಅವ್ಳಿಗೆ ಹೆರ್ಗಿ ಹೊಟ್ಟಿ ನೋವ್ ಶುರುವಾಯ್ತ್, ಹೆರ್ಗಿ ವಾರ್ಡಿಗೆ ಕರ್ಕಂಡ್ ಹೋದ್ರ್, ಅಷ್ಟೊತ್ತಿಗೆ ಅಲ್ಲಿಗ್ ಬಂದ್ ಡಾಕ್ಟ್ರಿಗೆ ಅವ್ಳ್ ಬೊಬ್ಬಿ ಕೇಣತ್ತಂಬ್ರ್… ಅಯಯ್ಯಬ್ಯೋ, ಹೊಟ್ಟಿ ನೋವ್ ತಡುಕಾತಿಲ್ಯೋ, ನಂಗೆಡಿದೋ… ಡಾಕ್ಟ್ರೆ ನೋವ್ ಕಡ್ಮಿ ಆಪುಕೆ ಎಂತಾರು ಕೋಡಿನ್ಯೋ… ಅವ್ಳ್ ಬೊಬ್ಬಿಯೇ ಬೊಬ್ಬಿ… ಅಚ್ಚ ಕುಂದಾಪ್ರ ಕನ್ನಡದಗೇ… 🙂

  

ನೀವೆಲ್ಲ ಹೀಂಗ್ ಜಾಪ್ ಮಾಡುವರಲ್ಲ ಅಂದೇಳಿ ನಂಗ್ ಗೊತ್ತಿತ್ತ್… ಇಲ್ದಿದ್ರೆ ನೀವೆಲ್ಲ ಈ ಬ್ಲಾಗಿಗೆ ಬತ್ತಿದ್ರ್ಯಾ? ನಿಮ್ಮ್ ಮಕ್ಳತ್ರ ಕುಂದಾಪ್ರ ಕನ್ನಡದಗೇ ಮಾತಾಡ್ತ್ರಿ ಅಲ್ದಾ?

 


ಒಂದಿಷ್ಟ್ ಹನಿ ನಾನ್ ಬರದ್. ಮನಸಿನ ಮರ್ಮರ ಬ್ಲಾಗಗೆ ಹಾಕಿದ್ದೆಅದನ್ನೆ ಕುಂದಾಪ್ರ ಕನ್ನಡದಗೆ ಬರ್ದ್ರೆ ಹ್ಯಾಂಗೆ ಅಂದೇಳಿ ಒಂದೆರ್ಡ್ ಬರ್ದಿದೆ ಕಾಣಿಹ್ಯಾಂಗಿತ್ತ್ ಹೇಳಿ

 

ಎಲ್ಲೋ ಸೊರ್ದ್ ಮಳಿಗೆ

ಹೊಳಿ ನೀರ್ ಕೆಂಪಾತ್ತಲ್ದಾ ಹಾಂಗೇ

ಎಲ್ಲೋ ಇಪ್ಪ್ ನಿನ್ನ್ ನೆನ್ಪ್ ಆಯಿ

ಕಣ್ಣಂಗ್ ನೀರ್ ಬಂತ್ ನಂಗೆ

——————

ಸತ್ ಹೋದ ಸಂಬಂಧ ಎಲ್ಲ

ನೆನ್ಪ್ ಮಾಡ್ಕಂಬ್ದ್ ಎಂತಕ್ ಅಂತ್ರ್ಯಾ?

ಸತ್ತರ್ ಎದ್ದ್ ಬಂದ್ ಕತಿ

ಇತ್ತಲೆ ನಂಬ್ತ್ರ್ಯಾ?

——————

ನಿನ್ನ್ ನೆನ್ಪಾಯ್ದಿರ್ಲಿ ಅಂದೇಳಿ

ದೇವ್ರನ್ ಬೇಡ್ಕಂತಿದ್ದೆ

ಅಷ್ಟೊತ್ತಿಗ್ ನಿನ್ನ್ ನೆನ್ಪಾಯ್ತ್ ಕಾಣ್

ನೆನ್ಪೆ ಹೋಯ್ತ್ ನಾ ಎಂತ ಕೇಂತಿದ್ದೆ

——————-

ಆಕಳ್ಕಿ ಬಂದಾಗ್ಳಿಕೆಲ್ಲ ಹೇಳ್ತ್ರ್

ಯಾರೋ ನೆನ್ಪ್ ಮಾಡ್ಕಂತಿರ್ಕ್

ಹಂಗಾರ್ ನಿಂಗ್ ದಿನೀಡಿ

ಆಕಳ್ಸಿ ಆಕಳ್ಸಿ ಸಾಕಾಯಿರ್ಕ್