Archive for ಜುಲೈ, 2010


ಬಲ ಮಾಡುದ್ ಬೆಳೆಸಿ ದೊಡ್ಡವರನ್ನಾಗಿ ಮಾಡು

ಬಳಕೆ –

೧.ದೊಡ್ಡಕೆ ಮಾತ್ ಬತ್ತ್ ಅಂದೇಳಿ ಮಾತಾಡ್ಬೆಡ, ಮಾತಾಡುಕೆ ಭಾರಿ ಸುಲ್ಭ, ನಿಮ್ಮನೆಲ್ಲ ಬಲ ಮಾಡ್ಕಿದ್ರೆ ಎಷ್ಟ್ ಕಷ್ಟ್ ಪಟ್ಟಿದೆ ಅಂದೇಳಿ ನಿಂಗೆಂತ ಗೊತಿತ್?

೨.ನಿಮ್ಗ್ ಬೇರೆ ಕೆಲ್ಸ ಇಲ್ಯಾ, ಮಕ್ಳನ್ನೆಲ್ಲ ಸಾಕಿ ಬಲ ಮಾಡುದೇ ಕಷ್ಟ, ಇನ್ನ್ ಶಾಲಿ ಗೀಲಿಗೆಲ್ಲ ಕಳ್ಸುಕೆ ಎಲ್ಲಿಗೆ ಹೋಪ್ದ್?

ಬಲಾದರ್ ಬಲ ಆದವರು ,ದೊಡ್ಡವರು , ಹಿರಿಯರು

ಬಳಕೆ –

1. ಸಣ್ಣರಂದೇಳಿ ಇಲ್ಲ, ಬಲಾದರಂದೇಳಿ ಇಲ್ಲ, ಎದ್ರುತ್ರ ಕೊಡುಕೊಂದ್ ಸಮಾ ಕಲ್ತಿದೆ ಅಲ್ದಾ, ನಿಂಗ್ ಶಾಲ್ಯಗೆ ಮಾಷ್ಟ್ರ್ ಇದ್ನೇ ಹೇಳಿ ಕೊಟ್ಟದ್ದಾ?

೨ ನೀವ್ ನೀವೆ ಜಗ್ಳ ಮಾಡ್ಕಂಡ್ ಹೊಡ್ಕಂಬ್ದಾರೆ, ಹಂಗಾರೆ ಮನ್ಯಗೆ ಬಲಾದರ್ ಅಂದೇಳಿ ಇಪ್ದ್ ಎಂತಕೆ?

ಚಿರ್ಟು(ಚಿರಿಟು)ಮುರುಟಿಕೊಳ್ಳು, ಸುರುಟಿಕೊಳ್ಳು,ಮುದುರು ( ಸಂಕ್ಷಿಪ್ತ ಕನ್ನಡ ನಿಘಂಟು)

ಬಳಕೆ –

೧          ಬಿಸ್ಲ್ ರಾಪ್ ಜೋರಿತ್ತ್. ಒಂದ್ ನಾಕ್ ಹನಿ ಮಳಿ ಬಿದ್ದಿರಾರೂ ಆತಿದ್ದಿತ್, ಮೆಣ್ಸಿನ ಗಿಡ್ದಗೆ ಕೋಡ್ ಪೂರಾ ಚಿರ್ಟಿ

ಹೋಯಿತ್ತ್

೨          ಒಂದ್ ನಾಕ್ ಮಾತ್ ಹೆಚ್ಚ್ ಹೇಳ್ರ್ ಸಾಕ್, ಮುಖ ಚಿರ್ಟ್ಸಕಂಡ್ ಕೂಕಂಡಾಯ್ತ್

೩          ಮಾಯ್ನ್‌ಮಿಡಿ ಉಪ್ಪಿಗ್ ಹಾಕದ್ದ್ ಉಪ್ಪಿನ್‌ಕಾಯ್ ಮಾಡ್ವ ಅಂದೇಳಿ ತೆಗ್ದ್ರೆ ಸಮಾ ಚಿರ್ಟಲೇ ಇಲ್ಲಪ್ಪ, ಉಪ್ಪ್ ಹಾಕದ್ದ್

ಸಾಕಾಯ್ಲಿಲ್ಯೋ ಏನೋ

ಉರ್ಡಕಂಬ್ದ್ ಹೊಡೆದಾಡು, ಬಡಿದಾಡು

ಬಳಕೆ –

೧          ಉರ್ಡ್ಕಂಬ್ಕೆ ಹೋಯ್ಬೆಡ ಅಂದ್ರೆ ಕೇಂತಿಲ್ಲ. ನಾವೆಲ್ಲ ಹೇಳ್ರೆ ನಿಂಗ್ ಸಾಕಾತಿಲ್ಲ. ನಾಳೆ ಶಾಲಿಗೆ ಬಂದ್ ನಿಮ್ ಹೆಡ್ಮಾಷ್ಟ್ ಹತ್ರ ಹೇಳ್ತೆ. ಅವ್ರ್ ಬೆನ್ಮೇಲೆ ಎರ್ಡ್ ಬಿಟ್ರೆ ಎಲ್ಲ ತನ್ನಂತ್ಲೇ ಸಮಾ ಆತ್ತ್.

೨          ಸುರು-ಸುರಿಗೆ ಬೈಕಂತ ಇದ್ದಿರ್, ಒಂದ್ಗಳ್ಗಿ ಆಪ್ರೊಳ್ಗೆ ಇಬ್ರೂ ಅಂಗಿ ಕೈ ಮೇಲ್ ಮಾಡ್ಕಂಡ್ ಉರ್ಡಕಂಡದ್ದೇ ಅಲ್ದಾ, ಅಲ್ಲಿದ್ದರೆಲ್ಲ ಒಟ್ಟಾಯಿ ಬಿಡ್ಸರ್. ಅಲ್ದಿರೆ ಇವತ್ತ್ ಕಾಂತ ಕಾಂತ ಒಂದ್ ಕತಿ ಆತಿತ್ತ್

ಲಾಟ್ ಬಿಡು ಸುಳ್ಳು ಹೇಳು, ಬೊಗಳೆ ಬಿಡು

ಬಳಕೆ –

೧          ಅಂವ ಹೇಳ್ತ ಅಂದೇಳಿ ನೀ ಅದನ್ನೆಲ್ಲ ನಂಬುಕ್ ಹೋಯ್ಬೆಡ, ಕೇಂಬರಿದ್ರೆ ಅಂವ ಎಷ್ಟೂ ಲಾಟ್ ಬಿಡ್ತ.

೨          ನಮ್ಗ್ ಗೊತ್ತಿಪ್ಕೋಯಿ ಆಯ್ತ್, ಯಾರಾರೂ ಗೊತ್ತಿಲ್ದಿದ್ದರೆ ಸಿಕ್ರೆ ಇವ ಲಾಟ್ ಬಿಡತ್ತ್ ಕೇಂಡ್ರೆ ಹೌದ್ ಅಂದೇಳಿಯೆ ಅಂದ್ಕಣ್ಕ್

ಲಗ್ತ್ ಆಯಿ ಅನುಕೂಲವಾಗಿ, ಆ ಹೊತ್ತಿಗೆ ಸರಿಯಾಗಿ

ಬಳಕೆ –

೧          ನೀವ್ ಬಂದದ್ದ್ ಲಗ್ತ್ ಆಯ್ತ್ ಕಾಣಿ, ಇನ್ನೇನ್ ದೇವ್ರಿಗ್ ಮಂಗ್ಳಾರ್ತಿ ಶುರು ಆಪುಕಾಯಿತ್

೨          ಈಗ ಎರ್ಡ್ ಹೊಸ ಬಸ್ಸ್ ಬಿಟ್ಟಿರಲ ಭಾರಿ ಒಳ್ಳೆದಾಯ್ತ್, ನಾವ್ ಶಾಲಿಗ್ ಹೊರ್ಡು ಸುರಿಗೆ ಲಗ್ತಾಯಿ ಬತ್ತ್

೩          ಈ ಉರಿ ಬಿಸ್ಲಗೆ ಹೊರ್ಡುದ್ ಬ್ಯಾಡ, ಹೊತ್ತೋಪತ್ತಿಗೆ ಹೊರ್ಟ್ರೆ ಲಗ್ತ್ ಆತ್ತ್, ಕತ್ಲಿ ಆಪುರೊಳ್ಗೆ ಮನಿಗ್ ಹೋಯ್ಲಕ್ಕ್

ವಾರಂತ್ ಸಾಲಾಗಿ, ಅನುಕ್ರಮವಾಗಿ

ಬಳಕೆ –

೧          ಈ ಸರ್ತಿ ಚೌತಿ ಶುಕ್ರವಾರ ಬಂದದ್ದ್ ಭಾರಿ ಲಾಯ್ಕಾಯ್ತ್, ವಾರಂತ್ ಆಯಿ 3 ದಿನ ರಜಿ ಸಿಕ್ಕತ್ತ್

೨          ಈ ಮಳ್ಗಾಲದಗೆ ಮನ್ಯಗೆ ಒಬ್ರಿಗೆ ಜ್ವರ ಬಂದದ್ದೇ ಸೈಯಲ್ಲ, ವಾರಂತಾಯಿ ಒಬ್ಬೊಬ್ರಿಗೇ ಜ್ವರ, ಬಿಡ್ಸದ್ ಹಾಸ್ಗಿ ಮಡ್ಚಲೇ ಇಲ್ಲ

ಎಬ್ಬು ಅಟ್ಟು, ಓಡಿಸು ( ಸಂಕ್ಷಿಪ್ತ ಕನ್ನಡ ನಿಘಂಟು)

ಬಳಕೆ –

೧          ಮಧ್ಯಾಹ್ನ ಒಂದ್ ಗಳ್ಗಿ ಮಲ್ಕಂಬ ಅಂದ್ರೆ ಬಿಡ್ತ್ವಾ, ಯಾರ್ಯಾರ ಮನಿ ಗಂಟಿ ಪೂರಾ ಇಲ್ಲೇ ಸಾರ್ತಿ ಆಯಿದೊ, ಎಬ್ಬಿ ಎಬ್ಬಿ ಸಾಕಾಯ್ತ್

೨          ಇನ್ನೊಂದ್ ಸ್ವಲ್ಪ ಹೊತ್ತ್ ಮೇಯ್ಲಿ ಬಿಡ್, ಹೊತ್ತ್ ಹೋಪತಿಗೆ ಹಟ್ಟಿಗೆ ಎಬ್ಕಂಡ್ ಬಂದ್ರ್ ಸಾಕ್

ಹೊಟ್ಟಿ ಹೊರ್ಕಂಬ್ದ್ ಉದರ ಪೋಷಣೆ (ಜೀವನ ನಿರ್ವಹಣೆ ಅನ್ನುವುದು ಸೂಚ್ಯಾರ್ಥ)

ಹೊರೆ = ಕಾಪಾಡು, ಪೊರೆ, ಪೋಷಿಸು, ಸಲಹು ( ಸಂಕ್ಷಿಪ್ತ ಕನ್ನಡ ನಿಘಂಟು)

ಬಳಕೆ –

೧          ಏನೋ ಓದದ್ದ್ ದಂಡ ಆಪುಕಾಗ ಅಂದೇಳಿ ಅಂವ ಕೆಲ್ಸಕ್ ಹೋತಾ ಬಿಟ್ರೆ, ಅದ್ರಗೇ ಹೊಟ್ಟಿ ಹೊರ್ಕಣ್ಕ್ ಅಂದೇಳಿ ಇಲ್ಲ. ಮನಿ ಬದ್ಯಗೆ ಬೇಕಾದಷ್ಟ್ ಇತ್ತಂಬ್ರಪ.

೨          ಈಗ ಏನೋ ಒಬ್ನೇ, ಹ್ಯಾಂಗೋ ಹೊಟ್ಟಿ ಹೊರ್ದ್ ಹೊತ್ತ್, ಕೆಲ್ಸ ಮಾಡ್ರೂ ಮಾಡ್ದಿದ್ರೂ ಹ್ಯಾಂಗೋ ನೆಡ್ದ್ ಹೋತ್ತ್. ಕಡಿಗೆ ಮದಿ ಗಿದಿ ಆರ್ಮೇಲಾರೂ ಹೆಂಡ್ತಿ ಮಕ್ಳ್ ಹೊಟ್ಟಿ ಹೊರುಕಾರೂ ಕೆಲ್ಸ ಮಾಡ್ಕೇ ಅಲ್ದಾ?

ಕಣ್ ಕಸ್ತ್ಲಿ(ಕಣ್ ಕತ್ಲಿ) – ಕಣ್ಣು ಕತ್ತಲೆ

ಬಳಕೆ –

೧          ನಿನ್ನೆ ರಾತ್ರಿ ಉಣಲ್ಲ ಹೌದಲ್ದಾ, ಬೆಳಿಗ್ಗೆ ಏಳುವತಿಗೇ ಒಂದ್ನಮನಿ ಸಂಕ್ಟ ಆಯಿ ಕಣ್ಣ್ ಕತ್ಲಿ ಬಂದಂಗಾಯ್ತಪ್ಪ

೨          ಜ್ವರಕ್ಕಂದೇಳಿ ತಕಂಡ್ ಮಾತ್ರಿ ರಾಪ್ ಜೋರಿತ್ತ್, ನುಂಗಿ ಸ್ವಲ್ಪ ಹೊತ್ತಿನಗೆ ಹೊಟ್ಟಿ ಸಂಕ್ಟ ಆಯಿ ಕಣ್ಣ್ ಕಸ್ತ್ಲಿ ಬಂದಾಂಗಾಯ್ತ್

ಹಳಿನ್ ಹಿಂಡ್ಲ್ ಕಾಡುಗಿಡ ಅಥವ ಕುರುಚಲು ಗಿಡಗಳ ದಟ್ಟವಾದ ಪೊದೆ

ಹಳು=ಕಾಡು ಗಿಡ, ಅರಣ್ಯ ( ಸಂಕ್ಷಿಪ್ತ ಕನ್ನಡ ನಿಘಂಟು)

ಹಿಂಡಲು=ಪೊದರು,ಪೊದೆ,ದಟ್ಟವಾಗಿ ಬೆಳೆದ ಗಿಡಗಳ ಗುಂಪು ( ಸಂಕ್ಷಿಪ್ತ ಕನ್ನಡ ನಿಘಂಟು)

ಬಳಕೆ –

೧          ಮಕ್ಳೆ , ಕತ್ಲಿ ಆರ್ ಮೇಲೆ ಆ ಹಳಿನ್ ಹಿಂಡ್ಲ್ ಹತ್ರ ಹೋಯ್ಬೇಡಿ, ಮೊನ್ನೆ ಒಂದ್ ಹಾವ್ ತಿರ್ಗತಿದ್ದಿತ್ತ್

೨          ಈ ಹಳು ಒಂದ್ ಸವ್ರಿ ಕೊಡುಕ್ ಯಾರಾರೂ ಸಿಕ್ಕಿರ್ ಆತಿತ್ತ್, ಹಳಿನ್ ಹಿಂಡ್ಲಗೆ ಹುಲಿ ಬಂದ್ ಕೂಕಂಡ್ರೂ ಗೊತ್ತಾತಿಲ್ಲ.

ದರ್ಲಿತರಗೆಲೆ

ಬಳಕೆ –

೧          ಇದ್ಯಾವ್ ನಮನಿ ಗಾಳಿಯಪ್ಪ, ಬೆಳಿಗ್ಗೆಯಷ್ಟೇ ದರ್ಲಿ ಗುಡ್ಸದ್ದ್, ಈಗ ಇನ್ನೊಂದ್ಸಲಿ ಗುಡ್ಸ್‌ಕಾಯ್ತ್

ಬಡ್ಗಿ ಏಟು, ಪೆಟ್ಟು, ಹೊಡೆತ

ಈ ಪದ ಬಹುಶಃ ಬಡಿಗೆ (ಕೋಲು, ದೊಣ್ಣೆ) ಪದದಿಂದ ಬಂದಿರಬೇಕೆಂಬುದು ನನ್ನ ಅನಿಸಿಕೆ

ಬಳಕೆ –

೧          ಸುಮ್ನ್ ಕೂಕಂತ್ಯಾ ಇಲ್ಲ ಬಡ್ಗಿ ಬೇಕಾ ಹೇಳ್

೨          ಮನಿಗ್ ಬಾ ಇವತ್ತ್, ಅಪ್ಪಯ್ಯನಿಗೆ ಹೇಳಿ ಸಮಾ ಎರ್ಡ್ ಬಡ್ಗಿ ಬಿದ್ರೆ ನಿಂಗ್ ಬುದ್ಧಿ ಬಪ್ದ್

ಗೊಬ್ರ್ ಹೆಡ್ಗಿ ಈ ಶಬ್ದದ ಅರ್ಥ ಗೊಬ್ಬರ ಹೊರಲು ಬಳಸುವ ಬುಟ್ಟಿ ಅಂತಿದ್ದರೂ ಕೂಡ ಇದನ್ನು ತುಂಬಾ, ಜಾಸ್ತಿ ಅನ್ನುವ ಅರ್ಥದಲ್ಲಿ ಬಳಸಲಾಗುತ್ತದೆ

ಬಳಕೆ –

೧          ನನ್ ಕೈಲ್ ಮಾಡಿ ಪೂರೈಸುಕೆ ಎಡಿಯ. ಒಂದ್ ಗೊಬ್ರ್ ಹೆಡ್ಗಿ ಕೆಲ್ಸ ಇತ್ತ್.

೨          ಆಡುಕ್ ಹೋರ್ ಅಡ್ಡಿಲ್ಲ, ಮೈ ಮಂಡಿ ಕಂಡ್ರ್ ಸಾಕಲೆ, ಒಂದ್ ಗೊಬ್ರ್ ಹೆಡ್ಗಿ ಮಣ್ಣ್ ಇತ್ತ್, ಎಂತ ಮಣ್ಣಗೇ ಬಿದ್ದ್ ಹೊಡ್ಕದ್ದಾ?

ವದ್ಕಂಬ್ದ್(ಒದ್ಕಂಬ್ದ್) – ಶ್ರಮಿಸು, ಒದ್ದಾಟ ನಡೆಸು, ಪರಿಶ್ರಮ ಪಡು

ಬಳಕೆ –

೧          ಬೆಳ್ಗಿಂದ ಸಾಂಯ್ಕಾಲದವರಿಗೂ ಒದ್ಕಂಡ್ರೂ ಸಾಕಾತಿಲ್ಲ, ನಂಗಂತೂ ಮಾಡಿ ಮಾಡಿ ಸಾಕಾಯ್ತ್

೨          ನಾನೊಬ್ನೆ ಎಷ್ಟ್ ಅಂದೇಳಿ ಒದ್ಕಂಬ್ದ್, ಮನಿ ಅಂದ್ರ್ ನಂಗೊಬ್ನಿಗೆಯಾ, ನೀನೂ ಮನಿಯನೇ ಅಲ್ದಾ?