ಮತ್ತೆ ಎಲ್ಲ ಹ್ಯಾಂಗಿದ್ರಿ? ಊರಗ್ ಮೊನ್ನೆ ಮತ್ತ್ ಮಳಿ ಬಂದಿತಂಬ್ರಲೆ… ನಿಮ್ದ್ ಕೊಯ್ಲ್ ಎಲ್ಲಾ ಆಯ್ತ್ ಕಾಣತ್ ಅಲ್ದಾ? ಹ್ಯಾಂಗೆ ಈ ವರ್ಷ ಬ್ಯಾಸಾಯ ಅಡ್ಡಿಲ್ಲ್ಯಾ? ಪೆರ್ಡೂರ್, ಸಾಲಿಗ್ರಾಮದರದ್ ತಿರ್ಗಾಟ ಶುರು ಆಯಿರ್ಕ್ ಅಲ್ದಾ?

 ಆಟ ಗೀಟ ಕಾಂಬ್ಕ್ ಹೋಯಿಲ್ಲ್ಯಾ? ಈಗೀಗ ಆಟ ಕಾಂಬ್ಕ್ ಹೋಪ್ಕೇ ಮನ್ಸ್ ಬತ್ತಿಲ್ಲಪ. ಎಲ್ಲಾ ಪಿಚ್ಚರಿದೇ ಕತಿ ಮಾಡುದಾರೆ ಆಟ ಎಂತಕ್ ಕಾಣ್ಕ್ ರಾತ್ರಿಡೀ ನಿದ್ರಿ ಬಿಟ್ಕ್ಂಡ್. ಪಿಚ್ಚರೇ ಕಾಣ್ಲಕ್. ಆರೂ ಒಂದ್ ಅಂದ್ರೆ ಬೆಂಗ್ಳೂರಗೆ ಬಂದಲ್ಲ್ ಈ ಸರ್ತಿ ಎಲ್ಲಾ ಮ್ಯಾಳದರೂ ಹೆಚ್ಚ್ ಪೌರಾಣಿಕ ಪ್ರಸಂಗವೇ ಆಡಿರ್. ನಾನೂ ಒಂಡೆರ್ಡ್ ಆಟ ಕಂಡಿನೆ. ಮ್ಯಾಳದರ್ ಹೇಳುದ್ ಎಂತ ಅಂದ್ರೆ ಹೊಸ ಪ್ರಸಂಗ ಆಡ್ರ್ ಮಾತ್ರ ಜನ ಬತ್ರೆ. ಹಳ್ತೆಲ್ಲಾ ಯಾರಿಗೂ ಬ್ಯಾಡ. ಜನ ಬರ್ದಿರೆ ನಾವ್ ಮ್ಯಾಳ ನೆಡ್ಸುದಾರೂ ಹ್ಯಾಂಗೆ ಅಂದೇಳಿ. ಅವ್ರ್ ಹೇಳುದ್ರಗೂ ಸತ್ಯ ಇಲ್ದೇ ಇಲ್ಲ. ಆರೂ ಇದ್ ಕತಿ ಹ್ಯಾಂಗಾಯ್ತ್ ಗೊತ್ತಾ, ೨೦-೨೦ ಬಂದ್ಮೇಲೆ ಟೆಸ್ಟ್ ಮ್ಯಾಚ್ ಕಾಂಬುಕೆ ಯಾರೂ ಬತ್ತಿಲ್ಲ ಅಂದೇಳ್ದಾಂಗ್ ಆಯ್ತ್. ಇದ್ ಪೂರ್ತಿ ಸತ್ಯವೂ ಅಲ್ಲ. ಹಾಂಗಂದೇಳಿ ತೀರಾ ಸುಳ್ಳ್ ಅಂದೇಳಿಯೂ ಹೇಳುಕಾತಿಲ್ಲೆ. ಈಗ ಬೆಂಗ್ಳೂರಗಾರೆ ನಾನೆ ಕಂಡಾಂಗೆ ಪೌರಾಣಿಕ ಪ್ರಸಂಗ ಆಡದಾಗ್ಳಿಕೆ ಯಾವತ್ತೂ ಜನ ಇಲ್ಲ ಅಂದೇಳಿ ಆಯಿಲ್ಲ. ಪ್ರತೀ ವರ್ಷ ದೇವಿ ಮಹಾತ್ಮೆ ಆಡ್ರೂ ಜನ ಭರ್ತಿಯಾದ್ದ್ ನಾನೇ ಕಂಡಿದೆ. ಆರೆ ಬೆಂಗ್ಳೂರಗೆ ಬಂದಾಂಗೆ ಊರಗ್ ಜನ ಪೌರಾಣಿಕ ಪ್ರಸಂಗಕ್ಕ್ ಬತ್ರಾ? ಯಾಕ್ ಬತ್ತಿಲ್ಲ ಹೇಳಿ… ಒಂದ್ ಒಳ್ಳೇ ಹತ್ತ್ ಪ್ರಸಂಗ ತಯಾರ್ ಮಾಡ್ಕಂಡ್, ಹೊಸ ಪ್ರಸಂಗದ ಸೆಟ್ಟಿಂಗಿಗೆ ಕರ್ಚ್ ಮಾಡು ದುಡ್ಡನ್ನ ಕಲಾವಿದ್ರಿಗೆ ಕೊಟ್ಟ್, ಒಳ್ಳೋಳ್ಳೇ ಕಲಾವಿದ್ರನ್ ಹಾಯ್ಕಂಡ್ ಹೊಡಿ ಹಾರ್ಸರೆ  ಎರ್ಡ್ ದಿನ ಬರ್ದಿರೂ ಕಡಿಗೆ ಆಟ ಕಂಡರ್ ಮಾತಾಡತ್ ಕೇಂಡ್ ಆರೂ ಕಾಂಬ ಹ್ಯಾಂಗಿತ್ತ್ ಅಂದೇಳಿ ಬಂದೇ ಬತ್ರೆ. ಜನ್ರಿಗೆ ಎಂತ ಗೊತ್ತಾ.. ಒಟ್ಟಾರ್ ಮೇಲ್ ಆಟ ರೈಸ್ಕ್.. ಆರೆ ಇದ ಸ್ವಲ್ಪ ಕಷ್ಟದ ಕೆಲ್ಸ. ಈಗ ಮ್ಯಾಳದರಿಗೆ ಹ್ಯಾಂಗಂದ್ರೆ… ಯಕ್ಷಗಾನ ಉಳೀಕ್ ಅಂದೇಳಿ ಇಲ್ಲ… ಒಟ್ಟಾರ್ ಮೇಲ್ ಅವ್ರ್ ಪೆಟ್ಗಿ ತುಂಬುಕ್ ಸುಲ್ಭದ್ ದಾರಿ ಆರ್ ಸಾಕ್. ಇದ್ ಹೀಂಗೆ ಮುಂದ್ ಹೋರೆ.. ಇನ್ನ್ ಮೇಲೆ ಆಟದಗೆ ನೀವ್ ಐಟಮ್ ಸಾಂಗ್ ಕಾಂಬ್ ದಿನವೂ ದೂರ ಇಲ್ಲ ಅನ್ಸತ್ತ್…

 ನಂಗೆ ಸಣ್ಣಕಿಪ್ಪತ್ತಿಗೆ ಅಷ್ಟೇನ್ ಆಟ ಕಾಂಬ್ ಗಿರ ಇರ್ಲಿಲ್ಲ. ಆಟ ಹೆಚ್ಚ್ ಕಾಂಬುಕೆ ಶುರು ಮಾಡದ್ದ್ ಬೆಂಗ್ಳೂರಿಗೆ ಬಂದ್ ಮೇಲೆ. ಊರಗಿದ್ದಾಗ್ಳಿಕೆ ವರ್ಷಕ್ ಒಂದ್ ತಪ್ರೆ ಎರ್ಡ್ ಟೆಂಟ್ ಮ್ಯಾಳದ ಆಟ. ಅದೂ ಚಕ್ರಮೈದಾನದಗೆ ಆರೆ ಮಾತ್ರ. ಆಗ ಹೆಚ್ಚ್ ಸಾಲಿಗ್ರಾಮ ಮ್ಯಾಳದ ಆಟ ಕಂಡದ್ದೇ ಹೆಚ್ಚ್. ನಂಗ್ ನೆನ್ಪ್ ಇಪ್ಪಾಂಗೆ ಮೇಘ ಮಯೂರಿ, ಶೃಂಗ ಸಾರಂಗ, ಧರ್ಮ ಸಂಕ್ರಾಂತಿ…ಶಿರ್ಸಿ ಮ್ಯಾಳದರದ್ದ್ ಭಾಗ್ಯ ಭಾರತಿ… ಹೀಂಗೆ ಸುಮಾರ್ ಆಟ ಕಂಡಿದೆ. ಅದ್ರಗೂ ಮೇಘ ಮಯೂರಿ ಮತ್ತ್ ಭಾಗ್ಯ ಭಾರತಿ ಆಗ್ಳಿಕೆ ಭಾರಿ ರೈಸಿತ್… ಮೇಘ ಮಯೂರಿ ಕತಿಯಗೆ ಬಪ್ಪ್ ಕೃಷಿಕ ಕಾಳನ ಕತಿಯೇ ಕಡಿಗೆ ‘ಹುಲಿಯಾದ ಕಾಳ’ ಕ್ಯಾಸೆಟ್ ಬಂದ್ ಭಾರಿ ಹೆಸ್ರ್ ಮಾಡಿತ್. ಆ ಕಾಳನ ಕತಿ ಸುಮಾರ್ ಮೊದ್ಲ್ ನನ್ ಬ್ಲಾಗಗೂ ಹಾಕಿದ್ದೆ… ಹೀಂಗೆ ವರ್ಷಕ್ ಒಂದೋ ಎರ್ಡ್ ಟೆಂಟಿನಾಟ ಬಿಟ್ರೆ ಮತ್ತ್ ಹರ್ಕಿ ಬಯಲಾಟ. ಮನಿ ಬುಡ್ದಲ್ಲೇ ಆಟ ಆರೆ ಆಟಕ್ ಹೋಪ್ದ್ ಅಂದೇಳಿ ಬೇಗ್ ಬೇಗ್ ಉಂಡಾಂಗ್ ಮಾಡಿ, ಎಲ್ಲರ್ಕಿಂತ ಮುಂದ್ ಹೋಯಿ ಕೂಕಂಡ್, ಕ್ವಾಡಂಗಿ, ಬಾಲಗೋಪಾಲ, ಶ್ರೀವೇಷ(ಇದ್ ಶ್ತ್ರೀವೇಷ ಆರೂ ಯಾರೂ ಹಾಂಗ್ ಹೇಳತ್ ಇಲ್ಲಿವರಿಗೂ ನಾನ್ ಕೇಣಲ್ಲಪ್ಪ) ಎಲ್ಲ ಕಂಡ್ ಇನ್ನೇನ್ ಒಡ್ಡೋಲ್ಗ ಶುರು ಆಪಲ್ಲೊರಿಗೆ ಒಂದ್ ಗಳ್ಗಿ ಆಟ ಕಂಡಾಂಗ್ ಮಾಡಿ ಆಟದ ಗರದಗೆ ಸುತ್ತ್ ಹೊಡುಕ್ ಹೋರೆ, ಆಟದ ಖರ್ಚಿಗೆ ಕಿಸಿಯೊಳ್ಗೆ ಇಟ್ಕಂಡ್ ಚಿಲ್ರಿ ಪೂರ್ತಿ ಕಾಲಿ ಆಪಲ್ಲೊರಿಗೆ ಮತ್ತ್ ಆಟದ ಬದಿಗೆ ಮುಖ ಹಾಕಿ ಕಾಂಬರ್ಯಾರ್? ಅದೆಲ್ಲಾ ಆಪಷ್ಟೊತ್ತಿಗೆ ಹ್ಯಾಂಗೂ ಕಣ್ಣ್ ಕೂರ್‌ತಿರತ್ತ್… ಆಟಕ್ಕ್ ಹೋಯ್ಕ್ ಅಂದೇಳಿ ಮಧ್ಯಾಹ್ನ ಮನ್ಕೋ ಅಂದೇಳಿ ಮನ್ಯರ್ ಒತ್ತಾಯಕ್ಕೆ ಕಣ್ಣ್ ಮುಚ್ದಾಂಗ್ ಮಾಡಿ ಅವ್ರಿಗೆಲ್ಲ ನಿದ್ರಿ ಬಂತ್ ಅಂದೇಳಿ ಗೊತ್ತಾರ್ಕೂಡ್ಲೇ ಹಗೂರ ಎದ್ದ್ ಆಡುಕೆ ಹೋದ್ದಲ್ದಾ? ಕಣ್ನ್ ಕೂರ್ದೇ ಎಲ್ಲಿಗ್ ಹೋತ್ತ್. ಮನಿಗ್ ಹೋಯ್ ಮಲ್ಕಂಡ್ರೂ ಆಯ್ತ್. ಇಲ್ದಿರೆ ಅಲ್ಲೇ ಎಲ್ಲಾರೂ ಒಂದ್ ಮುಲ್ಲಿ ಹಿಡ್ಕಂದ್ ಬಿದ್ಕಂಡ್ರೂ ಆಯ್ತ್. ಮತ್ತ್ ಆಟ ಕಾಣ್ಕಿದ್ರೆ ರಾಕ್ಷಸನ ವೇಷ ಬರ್ಕ್. ಅದ್ ಬಪ್ಪತಿಗೆ ಹ್ಯಾಂಗಿದ್ರೂ ಬೆಳ್ಗಿನ ಜಾಮ ಆಯಿರತ್ತ್. ಹಾಂಗಾಯಿ. ಅದನ್ನ್ ಒಂದ್ ಕಂಡ್ರೆ ಅಲ್ಲಿಗ್ ನಮ್ಮ್ ಆಟ ಮುಗ್ದಾಂಗೆ… ಆಟದ ಗರದಗೆ ರಾತ್ರಿಡೀ ನಿದ್ರಿ ಮಾಡ್ರೂ.. ಆಟದ ನಿದ್ರಿ ಅಂದೇಳಿ ಮಾರ್ನೆ ದಿನ ಶಾಲಿಗ್ ಹಾಂಟ್ ಬೇರೆ… ಆರೂ ಆಗ ಆಟಕ್ ಹೋಯಿ ಬಪ್ದಂದ್ರೆ ಸಣ್ಣಕೆ ಒಂದ್ ಹಬ್ಬಕ್ ಹೊಯಿ ಬಂದಷ್ಟೇ ಖುಶಿ… ಈಗ ಆಗ್ಳಿಕಿನ ನಮನಿ ಆಟವೂ ಇಲ್ಲ… ಇದ್ರೂ ಆ ಖುಷಿ ಖಂದಿತ ಬತ್ತಿಲ್ಲ… ಹಳ್ತ್ ಹೋಯಿ ಹೊಸ್ತ್ ಬಂದಾಂಗೆ… ಎಲ್ಲ ಬದ್ಲಾಯ್ಕೇ ಅಲ್ದಾ? ನಾಳಿಗೆ ಇದೂ ಹಳ್ತಾಯಿ ಮತ್ತ್ ಹೊಸ್ತ್ ಬರ್ಕೇ ಅಲ್ದಾ …. ಅಂದೇಳಿ ಹೇಳ್ತಾ ಈ ಆಟದ ಪುರಾಣಕ್ಕೆ… ಮಂಗಳ ಹಾಡ್ತೆ.

 

ಟಿಪ್ಪಣಿಗಳು
  1. Nagendra .M ಹೇಳುತ್ತಾರೆ:

    super

  2. Vishwanath Belve ಹೇಳುತ್ತಾರೆ:

    Hoy layk bardhiri, odhi thumba kushi ayth innu heenge barini…

  3. shashidhara hebbara ಹೇಳುತ್ತಾರೆ:

    istu dina I site kanDiralle. In Kaanthirte. aka?

  4. shashidhara hebbara ಹೇಳುತ್ತಾರೆ:

    ಕುಂದಾಪ್ರ ಕನ್ನಡ ಓದಿ ಕುಶಿ ಆಯ್ತ್ ಮಾರಾಯ್ರೆ. ಇಷ್ಟು ದಿನ ಈ ಸೈಟ್ ಕಂಡಿರಲ್ಲೆ. ಇನ್ ಕಾಂತಿರ್ತೆ . ಅಕಾ.

  5. Yogeesh ಹೇಳುತ್ತಾರೆ:

    ಸುರೇಶ ಅವ್ರು ಹೇಳಿದ್ದೆ ನಂಗೂ ಅನ್ನಿಸ್ತು… ಒಳ್ಳೆ ಪೋಸ್ಟ್ ಮಾರಾಯ…

  6. Mayya ಹೇಳುತ್ತಾರೆ:

    ಒಳ್ಳೆ ಬರದಿರಿ ಮರ್ರೆ. ಅದ್ನೆಲ್ಲ ನೆನ್ಪ್ಸ್ಕೊಂಡು ಮತ್ತೆ ಒಂದು ಆಟ ಕಣ್ಕು ಅನ್ಸ್ತಾ ಇತ್.
    ಮೇಲೆ ‘ಕೋಟ’ ಅವರದ್ದು ಕಾಮೆಂಟ್ಸ್ ಸಾ ಒಳ್ಳೆ ಇತು ಮರ್ರೆ

  7. vasant ಹೇಳುತ್ತಾರೆ:

    ನಮ್ಮ ಧಾರವಾಡ ಬದಿ ಹೇಳ್ದಂಗೆ ” ತಡದ ಮಳಿ ಜಡದ್ ಬಂತು” ಅಂಬಂಗ್ ಲೇಟ್ ಆರು ಒಳ್ಳೆ ಪೋಸ್ಟ್ ಬಯಿಂತ್. ಕಮಲ ಶೀಲೆ ಮ್ಯಾಲದ ಆಟ ಕಂಡಂಗ್ ಆಯ್ತ್ ಓದ್ತಾ ಓದ್ತಾ 🙂

  8. suresh kota ಹೇಳುತ್ತಾರೆ:

    ಹ್ವಾಯ್ ಕನ್ನಂತ್ರೆ, ಥ್ಯಾಂಕ್ಸ್ ಮಾರಾಯ್ರೆ ಹಳೆದೆಲ್ಲಾ ನೆನಪ್ ಮಾಡಿದ್ದಕ್ಕೆ.

    ಆಟ ಇತ್ತ್ ಅಂದೇಳಿ ಗೊತ್ತಾರ್ ಸಾಕ್ ಸಾಂಯ್ಕಾಲ ಶಾಲಿಯಿಂದ ಸೀದ ಮನಿಗ್ ಬಂದ್ ಚೀಲ್ ಬಿಸಾಕಿ, ಆಟದ್ ಗಾರಕ್ಕೆ ಓಡುದ್, ರಾತ್ರಿ ಉಂಬು ಹೊತ್ತಿಗೆ ಮನಿಗ್ ಬಂದ್ ಗಬ ಗಬ ಉಂಡ್ಕಂಡ್ ಅಪ್ಪಯ್ಯನತ್ರ ದಮ್ಮಯ್ಯ ಹೊಡ್ದ್ ಒಂದೋ ಎರಡೋ ರೂಪಾಯ್ ತಕಂಡ್ ಮತ್ತೆ ಆಟದ್ ಗಾರಕ್ಕೆ ಹೋರೆ ಮತ್ತ್ ವಾಪಾಸ್ ಬಪ್ಪುದ್ ಬೆಳ್ಗಾರ್ ಮೇಲೇ!…
    ಕೋಡಂಗಿ, ಬಾಲಗೋಪಾಲ, ಸ್ತ್ರೀವೇಷ ಎಲ್ಲ ಮುಗ್ದ್ ಹಾಂಗ್ ಭಾಗ್ವತ್ರ್ ಇಂದಿರೆಗೆ ತಲೆ ಬಾಗಿ.. ಶುರು ಮಾಡುವಷ್ಟೊತ್ತಿಗೆ ನಮ್ ತಲಿಯೂ ಬಾಗುಕೆ ಶುರು ಆಯ್, ಜೊತೆಗಿದ್ದನತ್ರ ಹಾಸಿಗಾರ ಬಪ್ಪುಕು ಏಳ್ಸ್ ಮಾರಾಯ ಅಂದೇಳಿ ಹಾಂಗೆ ಕಣ್ ಕೂರುದ್. ಮಧ್ಯ ಎಷ್ಟೊತ್ತಿಗೋ ಎದ್ಕಂಡ್ ಒಂಚೂರ್ ಆಟ ಕಂಡ್ಕಂಡ್, ಆಟದ್ ಗಾರಕ್ಕೆ ಒಂದ್ ಸುತ್ತಾಕಿ, ಅಪ್ಪಯ್ಯ ಕೊಟ್ ದುಡ್ಡಂಗೆ ಮುಂಡಕ್ಕಿ ಉಪ್ಕರಿ ತಿಂಬುದ್…
    ಬೆಳಿಂಜಾಮಕ್ಕೆ ಮನಿಗ್ ಬಪ್ಪತ್ತಿಗೆ ತಲಿಯೆಲ್ಲ ಗಿರ್ರ್ ಅಂಬುದ್, ಮಲ್ಕಂಡ್ರೆ ಕಿಮಿ ಸುತ್ತ ಚಂಡೆ ಶಬ್ದ ಗುಂಯ್ ಅಂಬುದ್, ಮತ್ತೆ ಮೂರ್ ನಾಕ್ ದಿನ ದೋಸ್ತಿಗಳೆಲ್ಲ ಮನೆ ಹತ್ರ, ಕೂಳಿ ಗದ್ದೆಂಗ್ ಸೇರ್ಕಂಡ್ , ಮಸಿ ಗೆಂಡದಂಗೆ ಮೀಸಿ-ನಾಮ ಬರ್ಕಂಡ್, ಖಾಲಿ ಡಬ್ಬಿ ಕವುಂಚ್ ಹಾಕಿ ಚಂಡೆ ತರ ಮಾಡಿ ಬಡ ಬಡ ಬಡ್ಕಂಡ್ ನಮ್ಗ್ ನಾವೇ ಯಕ್ಷಗಾನ ಡೈಲಾಗ್ ಹೇಳ್ಕಂಡ್ ಕೊಣಿತಿದ್ದದ್ದ್..
    ಅದೆಲ್ಲ ನೆನಪ್ ಬಿಡುಕಾತ್ತಾ ಮರ್ರೆ?
    ಆ ದಿನ ಎಲ್ಲ ಮತ್ತೆ ವಾಪಾಸ್ ಬತ್ತಾ ಮರ್ರೆ?..

ನಿಮ್ಮ ಟಿಪ್ಪಣಿ ಬರೆಯಿರಿ