Posts Tagged ‘ಸಂತಿ’


ಯಾವ್ದಾರೂ ಬೇಕ್ ಕಾಣಿ, ಈ ಸಂತಿ ದಿನ ಬಸ್ಸಗೆ ಹೋಪುದ್ ಮಾತ್ರ ಎಷ್ಟ್ ಕೊಟ್ರೂ ಬ್ಯಾಡ್ದೆ. ಅದ್ರಗೂ ಜೋರ ಸೆಕಿ ಇಪ್ಪ್ ಸಮಿಗೆ ಹೋಯ್ಕಾರೆ ಸಾಕ್‌ಬೇಕ್ ಅಂಬಂಗಾತ್. ಬುಧ್ವಾರ ಸಿದ್ಧಾಪ್ರದಗೆ ಸಂತಿ. ಹಾಂಗಂತೇಳಿ ಎಂತಾರೂ ಕೆಲ್ಸ ಇದ್ರೆ ಈ ವಾರ ಎಲ್ಲ ಕಾಂತ ಕೂಕಂಬುಕೆ ಆತ್ತಾ? ಅದೂ ದಿನ ಕೇಂಡರೊಟ್ಟಿಗ್ ಆ ದಿನ್‌ವೇ ಎಂತಾರೂ ಕೆಲ್ಸ ಬಂದ್ರೆ ಎಂತ ಮಾಡುಕಾತ್ತ್? ಒಟ್ಟ್ ಹೋಯ್ದಿರ್ ಉಪಾಯಿಲ್ಲ.

 

ನಾನ್ ಶಾಲಿಗ್ ಹೋಪತಿಗೆ ಬುಧ್ವಾರ ಬಂದ್ರ್ ಸಾಕ್. ಯಾಕಾರೂ ಬಂತೋ ಅಂತ್ ಅನ್ಸ್‌ತಿದ್ದಿತ್. ಬೆಳಿಗ್ಗೆ ಹ್ಯಾಂಗಿದ್ರೂ ಬೇಗ್ ಹೋಪುದಲ್ದಾ. ಹಾಂಗಾಯ್ ಬಚಾವ್. ಆರೆ ಸಾಂಯ್ಕಾಲ ಬಪ್ಪ್ ಕತಿ ಕೇಂಡ್ರ್ ಮಾತ್ರ ಸುಕ ಇಲ್ಲ. ಈ ಮಾಯ್ನ್‌ಕಾಯಿ ಉಪ್ಪಿಗ್ ಹಾಕ್ತ್ರ್ ಅಲ್ದಾ..ಥೇಟ್ ಅದೇ ನಮ್ನಿ. ಅದ್ರಗೂ ಬೆನ್ ಮೇಲೆ ಶಾಲಿ ಚೀಲ ಬೇರೆ. ಅದನ್ನ್ ಹೊತ್‌ಕಂಡ್ ಆ ಜನ್ರ್ ಎಡ್ಕಿಯಲ್ ನುರ್ಕಂತ ಒಳ್ಗ್ ಹೋಪ್ರ್ ಒಳ್ಗ್ ಮೈಯೆಲ್ಲ ಹೊಡಿಯಾದಂಗಾತ್. ಅರವತ್ತ್ ಜನ ಹಿಡೂ ಬಸ್ಸಿಗೆ ನೂರಿಪ್ಪತ್ ಜನ ತುಂಬ್ಸರೂ, ಇನ್ನೂ ನಾಕ್ ಜನ ಹಿಡ್ಸ್‌ಲಕ್ಕಲಾ ಅಂಬ್ ಉಮೇದಿ ಬಸ್ಸಿನರಿಗೆ. ಬಸ್ಸ್ ಹತ್ತುದ್ ಹ್ಯಾಂಗಿದ್ರೂ ಹತ್ತಿಯಾಯ್ತ್. ಆರೆ ಒಳ್ಗೆ ಉಸ್ರಾಡ್ತೆ ಅಂದ್ರೂ ಗಾಳಿ ಆಡುದಿಲ್ಲ. ಬೆವ್ರ್ ವಾಸ್ನಿ, ಸಂತಿಯಿಂದ ಎಲ್ಲ ಹಿಡ್ಕಂಡ್ ಬಂದ್ ಹೊಳಿ ಬಾಳಿಕಾಯಿ ವಾಸ್ನಿ ಎಲ್ಲಾ ಸೇರಿ ಗುಂ ಅಂತಿರತ್ತ್. ಕೆಳಗಿಪ್ಪತ್ತಿಗೆ ಹ್ವಾಯ್..ಒಂಚೂರ್ ಜಾಗ ಬಿಡಿನಿ ನಾ ಒಂಚೂರ್ ಮೇಲ್ ಬತ್ನೆ.. ಅಂದೇಳಿ ಮೇಲ್ ಹತ್‌ದರೆಲ್ಲ ಈಗ …ಪ್ಲೇಟ್ ಬದ್ಲ್ ಮಾಡಿ.. ಎಂತಾ ತುಂಬ್‌ತ್ರ್ ಮಾರಾಯ್ರೆ ಹಂಗಾರೆ..ಈ ಬಸ್ಸ್ ಬಿಡುದೇ ಇಲ್ಯಾ ಕಾಂತ್ ಅಂದ್ ಗೊಣಗೊಣ ಅಂದ್ರೂ ಬಸ್ಸಿನ್ ಕಂಡೆಕ್ಟ್ರಿಗೆ , ಏಜೆಂಟ್ರಿಗೆ ಎಡ್ದಷ್ಟ್ ಜನ ತುಂಬ್ಸುವರಿಗೆ ಮನ್ಸಿಗ್ ಸಮ್ದಾನ ಇಲ್ಲ. ಹಿಂದೋಯ್ನಿ, ಮುಂದೋಯ್ನಿ, ಮೇಲ್ ಹತ್ತಿ… ಅಂದೇಳಿ ನಿಂತ್ ಜಾಗದಗೂ ನಿಲ್ಲುಕ್ ಬಿಡ್ದೆ ಅವ್ರ್ ಜನ ತುಂಬುವಷ್ಟೊತ್ತಿಗೆ ಇಲ್ಲ್ ಒಳ್ಗ್ ಇದ್ದರಿಗೆ ಒಂದ್ ಬೆವ್ರ್ ಸ್ನಾನ ಆಯಿರತ್

 

ಅಂತೂ ಒಳ್ಗ್ ಸಾಸ್ಮಿ ಕಾಳ್ ಹಾಕುಕೂ ಚಡಿ ಇಲ್ಲ ಅಂತ್ ಗ್ಯಾರಂಟಿ ಆರ್ ಮೇಲೆ ಟಾಪ್ ಹತ್ತುವರನ್ನೆಲ್ಲಾ ಹರ್ಸಿ, ಅವ್ರಿಗೆಲ್ಲಾ ಟಿಕೇಟ್ ಕೊಟ್ಟ್, ಬಾಗ್ಲಗೂ ಒಂದ್ ಇಪ್ಪತ್ತೈದ್ ಜನ ನೇಲುಕ್ ಶುರುವಾರ್ ಮೇಲೆ ಅಂತೂ ಬಸ್ಸ್ ಬಿಡ್ತ್ ಅಂದೇಳಿ ಆಯ್ತ್. ಬಸ್ಸ್ ಹೊರ್‌ಟ್ರಾರೂ ಸುಕ ಇತ್ತ? ನಾಕ್ ನಾಕ್ ಮಾರಿಗೊಂದೊಂದ್ ಸ್ಟಾಪ್. ಎಲ್ಲೋ ಮಧ್ಯ ಸೇರ್ಕಂಡರ್ ದಾರ್ಯಗಿದ್ದರದ್ದೆಲ್ಲ ಕಾಲ್ ಮೆಟ್ಟಿ, ಅವ್ರನ್ ದೂಡ್ಕಂಡ್ ಬಾಗ್ಲಿಗೆ ಬಪ್ಪತಿಗೆ ಬಸ್ ಹೊರ್ಟಾಯಿರತ್. ಹೋಯ್…ಹೋಯ್ ನಿಲ್ಸಿನಿ.. ಇಳುಕಿತ್ತೇ .. ಅಂತ್ ಕೂಗಿ, ಕೈ ತಟ್ಟಿ ಬಸ್ಸ್ ನಿಲ್ಸಿ, ಅವ್ರನ್ ಇಳ್ಸಿ ಇನ್ನೇನ್ ಪಷ್ಟ್ ಗೇರಿಂದ ಸೆಕೆಂಡ್ ಗೇರಿಗ್ ಬಿದ್ದಿರತ್ ಅಷ್ಟೇ… ಮತ್ತೊಂದ್ ಸ್ಟಾಪ್ ಬಂದಾಯ್ತ್. ಅಂತೂ ಹಣಿಮಕ್ಕಿ, ಆಜ್ರಿ ಮೂರ್‌ಕೈ, ತಾರಿಕೋಡ್ಲ್, ಮುತ್ತಾಬೇರ್, ಕೆಳಂಜಿ ಮೋರಿ, ಸೊಸೈಟಿ, ರಾಂ ಭಟ್ರ್ ಅಂಗ್ಡಿ, ಎಡಮೊಗೆ ದಾರಿ, ಕಮಲಶಿಲೆ ದೇವಸ್ಥಾನ ಅಂದೇಳಿ ನಾಲ್ಕ್ ಕಿಲೋಮೀಟ್ರಿಗೆ ಹನ್ನೆರ್ಡ್ ಹದಿಮೂರ್ ಸ್ಟಾಪ್. ಅರೂ ಜನ ಇಳ್ದ್ ಇಳ್ದ್ ಒಂಚೂರ್ ಗಾಳಿ ಆಡುವಂಗೆ ಆಯಿರತ್ತ್. ಕಮ್ಲಶಿಲೆ ಏರ್ ಹತ್ತುಕ್ ಎಡಿದೋ ಅಂದೇಳಿ ಒರ್ಲತಾ ಎಕ್ಸ್‌ಟ್ರಾ ಗೇರಗೆ ಹಗೂರ ನಕ್ಕುಳ ಹರ್ದಂಗೆ ಹತ್ತಿ ಮೇಲ್ ಬಂದ್ ಮೇಲೆ ಅಯ್ಯಬ್ಬ ಅನ್ಸತ್ತ್. ಅಲ್ಲಿಂದ್ ಬಸ್ಸು ಮತ್ತೆ ಎಳ್‌ಬೇರ್ ದಾರಿ, ನಡ್‌ಮದ್ರಿ ದಾರಿ, ಸಾಯ್ಬರಂಗಡಿ, ಬಾಚುಗುಳಿ ಅಂತ ಮತ್ತೆ ಕಟ್ಟೆ ಪೂಜೆ ಮಾಡಿ ನಮ್ ಮನಿ ಹತ್ರ ಇಳು ಸುರಿಗೆ ಮೈಕೈ ಪೂರಾ ನೋವ್, ಅಂಗಿ ಚಡ್ಡಿ ಎಲ್ಲಾ ಬೇವ್ರ್ ವಾಸ್ನಿ. ಹೊಟ್ಟಿ ತಾಳ ಹಾಕ್ತಾ ಇದ್ರೂ, ನಾಕ್ ಚಂಬ್ ನೀರ್ ಮೈಮೇಲ್ ಬೀಳ್ದೆ ಎಂತ ತಿಂಬ್ಕೂ ಎಡಿಯ. ಅಂತೂ ಒಂದ್ ಸಂತಿ ದಿನದ ಬಸ್ಸಿನ ರಗ್ಳಿ ಮುಗೀತಲ್ಲ ಅಂತ್ ಸುಧಾರ್ಸ್‌ಕಂಬಷ್ಟೊತ್ತಿಗೆ ಮತ್ತೊಂದ್ ಬುಧ್ವಾರ ಬಂದಾಯಿರತ್ತ್.