ಹ್ವಾಯ್ ಇದೆಂತ ದರ್ಶಿನಿ ಹೋಟ್ಲಗೆ ಜೀರಾ ರೈಸು, ಘೀ ರೈಸು ಅಂದೇಳಿ ಬೋರ್ಡ್ ಬರ್ದ್ ಹಾಕಿದಂಗಿತ್ತಲೆ.. ಎಂತಾ ಮರಾಯ್ರೆ ಹೋಟ್ಲ್ ಗೀಟ್ಲ್ ಇಟ್ಟಿರ್ಯಾ ಎಂತ ಕತಿ ಅಂದೇಳಿ ಮಂಡಿ ಗಿಂಡ್ಕಂಬ್ಕೆ ಶುರು ಮಾಡ್ಬೇಡಿ… ಹೋಟ್ಲ್ ಇಟ್ಟರೇ ಈಗ ಹ್ಯಾಂಗ್ ಸುಧಾರ್ಸುದಂದೇಳಿ ಮಂಡಿ ಬಿಶಿ ಮಾಡ್ಕಂಡಿದ್ರ್ ಮರ್ರೆ..ನೀವ್ ಎಂತದೋ ಹೇಳ್ತ್ರಿ… 🙂

ಮತ್ತೆಂತ ಅಲ್ಲ ಇದ್ ನಾನ್ ಇವತ್ತ್ ಹಿಡ್ಕಂಡ್ ಬಂದ್ ಕುಂದಾಪ್ರ ಕನ್ನಡ ಶಬ್ದ. ಈ ಶಬ್ದದ್ ಕತಿ ಎಂತ ಕಾಂಬ ಬನಿ ಹಂಗಾರೆ…

ರೈಸು = ಗಡದ್ದಾಗಿರು, ಭರ್ಜರಿಯಾಗಿರು, ಮಿಂಚುವುದು, ಕಳೆಕಟ್ಟುವುದು, ಮೆರೆಯು

ಯಾರಾರು ಬೆಂಗ್ಳೂರ್ ಬದಿಯರ ಹತ್ರ ರೈಸು ಅಂದ್ರೆ ಎಂತ ಅಂದೇಳಿ ಕೇಂಡ್ರೆ ಅವ್ರಿಗ್ ಗೊತ್ತಿಪ್ದ್ ಇಷ್ಟೇ.. “ವೈಟ್ ರೈಸು, ಜೀರಾ ರೈಸು, ಕಲರ್ಡ್ ರೈಸು, ಘೀರೈಸು, ರೈಸ್ ಬಾತ್ ಗೊತ್ತು ನಂಗೆ. ಇದ್ರಲ್ಲಿ ಯಾವ ರೈಸ್ ನೀವ್ ಹೇಳಿದ್ದು? ಇಲ್ಲ ನೀವು ಬಾಸ್ಮತಿ ರೈಸ್ ಬಗ್ಗೆ ಹೇಳ್ತಿದ್ದಿರಾ?” ಹೀಂಗಂದೇಳಿ ನಿಮ್ಮನ್ನೇ ಕೇಂತ್ರ್. ಅದನ್ನೂ ಕನ್ನಡದಗೆ ಕೇಂಡ್ರೆ ನಿಮ್ಮಜ್ಜಿ ಪುಣ್ಯ!!

ಇನ್ನೊಂದ್ ಬಾಯಲ್ಡ್ ರೈಸು (ಅದೇ ಮರ್ರೆ ನಮ್ಮ್ ಕೊಚ್ಚಕ್ಕಿ ಕೂಳ್!!) ಅಂದೇಳಿ ಇತ್ತಾರು ಈ ಬದ್ಯರಿಗೆ ಅದ್ ಆಯ್ ಬತ್ತಿಲ್ಯಲೆ.

ಇರ್ಲಿ ಈಗ ನಮ್ಮ ಕುಂದಾಪ್ರದ ರೈಸು ಎಂತ ಕಾಂಬ

ಏನಾರೂ ಭರ್ಜರಿಯಾದ ಪ್ರದರ್ಶನ, ಗಮನಸೆಳೆಯುವ ವ್ಯಕ್ತಿ-ವಿಶೇಷಗಳು, ಗುಂಪಿನಲ್ಲಿ ಮಿಂಚುವುದು ಹೀಂಗೆ ಸುಮಾರ್ ಸಂದರ್ಭದಗೆ ಈ “ರೈಸುವುದು” ಉಪ್ಯೋಗ ಆತ್ತ್

ಈ ಶಬ್ದ ಇಂಗ್ಲೀಶಿನ ರೈಸ್(rise)ನಿಂದ ಬಂದಿತಾ ಅಂದೇಳಿ ನನ್ ಅನ್ಮಾನ ಅಷ್ಟೇ. ಹೇಚ್ಚೂ ಕಡ್ಮಿ ಅರ್ಥ ಸತೇ ಹೊಂದಾಣ್ಕಿ ಆತ್ತ್

ಬಳಕೆ:

೧. ಮೊನ್ನೆ ಪೆರ್ಡೂರ್ ಮ್ಯಾಳ್ದರ್ ಆಟ ಏನ್ ರೈಸಿ ಹೋಯ್ತ್ ಮರಾಯ, ಬೆಳ್ಗಾಪೊಲ್ಲೊರಿಗೂ ಒಂಚೂರ್ ಕಣ್ಣ್ ಕೂರ್ರೆ ಹೇಳ್. ಅದ್ರಗೂ ಗದಾಯುದ್ಧ ಪ್ರಸಂಗನ್ನಂತೂ ಹೊಡಿ ಹಾರ್ಸಿ ಕೊಟ್ರ್ ಕಾಣ್

೨. ಮೊನ್ನೆ ಅಷ್ಟ್ ಜನ ಪದ್ಯ ಹೇಳ್ರ್ ಸುಳ್ಳಾ.. ಆರೆ ನಿನ್ನ್ ಪದ್ಯ ರೈಸ್ದಷ್ಟ್ ಇನ್ಯಾರದ್ದೂ ರೈಸ್ಲಿಲ್ಲ ಕಾಣ್

೩. ಎಂತ ಒಳ್ಳೇ ಗಡ್ಜಾಯಿ ಮದಿ ಮನಿಗ್ ಹೋರ್ಟಂಗಿತ್ತ್…ಎಷ್ಟ್ ರೈಸುಕಿತ್ತೋ ಏನ್ ಕತಿಯೋ…

ಪುರೈಸು = ಫೂರೈಸು, ನೀಗಿಸು, ಈಡೇರಿಸು, ಪೂರ್ತಿಮಾಡು,ಭರ್ತಿ ಮಾಡು,ಸರಬರಾಜು, ಸಾಗಣೆ

 ಪೂರೈಸು ಅನ್ನುವ ಗ್ರಾಂಥಿಕ ರೂಪ ಬಳಕೆಯಲ್ಲಿದೆಯಾದರೂ ಅದನ್ನು ಕುಂದಾಪುರ ಕನ್ನಡದಲ್ಲಿ ಚಿಕ್ಕದಾಗಿ-ಚೊಕ್ಕವಾಗಿ ಪುರೈಸು ಅಂತ ಬಳಕೆಯೇ ಜಾಸ್ತಿ. ಗ್ರಾಂಥಿಕ ಕನ್ನಡದಲ್ಲಿ ಪೂರೈಸು ಅನ್ನುವುದರ ಅರ್ಥ ಹೆಚ್ಚಾಗಿ ಒದಗಿಸು, ಈಡೇರಿಸು, ಪೂರ್ತಿಮಾಡು ಅಥವಾ ಮುಗಿಸು ಅನ್ನುವ ಅರ್ಥದಲ್ಲಿಯೇ ಬಳಸಲಾಗುತ್ತದೆ. ಉದಾಹರಣೆಗೆ ವಿದ್ಯುತ್ ಪೂರೈಕೆ, ಆಸೆ ಪೂರೈಸು, ಕೆಲಸವನ್ನು ಪೂರೈಸು. ಆದರೆ ಕುಂದಾಪುರ ಕನ್ನಡದಲ್ಲಿ ಈ ಎಲ್ಲಾ ಸಂದರ್ಭಗಳಿಗೆ ಹೊರತಾದ ಬಳಕೆಯೂ ಇದೆ. ಇದಕ್ಕೆ ಬೆಂಗಳೂರಿನ ಕಡೆ ಬಳಕೆಯಲ್ಲಿರುವ, ವ್ಯಾಪಾರಿಗಳು ಉಪಯೋಗಿಸುವ ಗಿಟ್ಟುವುದು aಅನ್ನುವ ರೂಡಿಯಲ್ಲಿನ ಶಬ್ದಕ್ಕೆ ತೀರಾ ಹತ್ತಿರದ ಅರ್ಥದಲ್ಲಿ ವ್ಯಾಪಾರ-ವ್ಯವಹಾರಗಳ ಕೊಡು-ಕೊಳ್ಳುವಿಕೆಯಲ್ಲಿ ಬಳಸಲಾಗುತ್ತದೆ. ನನಗೆ ತಿಳಿದಂತೆ ಈ ರೀತಿಯ ಅರ್ಥದಲ್ಲಿ ಪೂರೈಸು ಪದವನ್ನು ಬೇರೆ ಕಡೆ ಬಳಸುವುದು ತೀರಾ ಕಡಿಮೆ

(ಕುಂದಾಪ್ರ ಕನ್ನಡದ್ ಬಗ್ಗೆ ಯೋಚ್ನೆ ಮಾಡುವತಿಗೆಲ್ಲಾ ನಂಗೊಂದ್ ಆಲೋಚ್ನಿ ಬತ್ತ್. ಎಂತ ಕೇಂಡ್ರ್ಯಾ? ಈ ಉಕ್ತಲೇಖನ(ಅಂದ್ರೆ ಯಾರಾರೂ ಹೇಳದ್ದನ್ನ ಬರ್ಕಂಬತಿಗೆ)ಕ್ಕೆ ಶಾರ್ಟ್ ಹ್ಯಾಂಡ್ ಅಂದೇಳಿ ಎಂತೆಲ್ಲಾ ಕೋಡ್ ವರ್ಡ್ ಮಣ್ಣ್ ಮಶಿ ಎಲ್ಲಾ ಕಲಿತ್ರಲೆ, ಅದ್ರ್ ಬದ್ಲ್ ಕುಂದಾಪ್ರ ಕನ್ನಡದಗೆ ಬರ್ಕಂಡ್ರೆ ಅದಕ್ಕಿಂತ್ ಬೇಗ್ ಬರುಕಾತ್ತಾ ಅಂದೇಳಿ!! ಈಗ ನೀವೇ ಕಾಣಿ…”ನಾನು ದಾರಿಯಲ್ಲಿ ಬರುತ್ತಿರುವಾಗ” ಇದನ್ನೇ ಕುಂದಾಪ್ರ ಕನ್ನಡದಗೆ “ನಾ ದಾರಿಲ್ ಬಪ್ಪತಿಗೆ” ಅಂದೇಳಿ ಎಷ್ಟ್ ಸಣ್ಣದ್ ಮಾಡಿ, ಲಾಯ್ಕಾಯಿ ಬರೀಲಕ್ಕ್ ಕಾಣಿ, ನಾ ಹೇಳದ್ದ್ ಸುಳ್ಳಾ ಮತ್ತೆ!! ಇರ್ಲಿ ವಿಷ್ಯ ಒಳ್ದಾರಿ ಹಿಡ್ಕಂಡ್ ಎತ್ಲಾಗೋ ಹೋಯ್ತ್

ಬಳಕೆ:

೧. ನನ್ ಒಬ್ನ್ ಕೈಲ್ ಮಾಡಿ ಪುರೈಸುಕಾಪ್ದಲ್ಲ. ಯಾರಾರೂ ನಾಕ್ ಜನ ಒಟ್ಟಿಗಿದ್ರೆ ಒಂದ್ ಕೈ ಕಾಣ್ಲಕ್ಕ್

೨. ಒಂದ್ ನಾಕ್ ದಿನ ಇದ್ದ್ ಹೋಪ್ರಿಯಲೆ, ನಾಳಲ್ಲ ನಾಡ್ದಂದ್ರೆ ಕಮ್ಲಶಿಲಿ ಹಬ್ಬ. ಹಬ್ಬ ಪುರೈಸ್ಕಂಡೇ ಹೋದಂಗಾತ್

೩. ಇಲ್ಯೇ.. ನೀವ್ ಅಷ್ಟ್ ಕಡ್ಮಿಗ್ ಕೇಂಡ್ರ್ ಹ್ಯಾಂಗೆ, ಅಷ್ಟಕ್ ಕೊಟ್ರೆ ನಮ್ಗ್ ಪುರೈಸುದಿಲ್ಲ

ಹೈಲ್ =  ಈ ಶಬ್ದಕ್ಕೆ ಹೈರಾಣ ಅನ್ನುವ ಶಬ್ದ ಅತೀ ಸಮೀಪದ ಅರ್ಥ ಕೊಡುತ್ತದೆ

(ಹೈರಾಣ =ಕಂಗಾಲಾಗುವಿಕೆ, ಕಷ್ಟ, ತೊಂದರೆ, ದಣಿವು, ಬಳಲಿಕೆ – ಸಂಕ್ಷಿಪ್ತ ಕನ್ನಡ ನಿಘಂಟು)

ಬಳಕೆ:

೧. ಅವ್ನ್ ಮಾತ್ ಕೇಂಡ್ಕಂಡ್ ನೀ ಹೈಲಾದ್ದ್ ಸಾಕ್ ಮರಾಯ. ಅವ್ನಿಗೆ ಎಂತ ಗೊತ್ತಿತಂದೇಳಿ ಅವ್ನತ್ರ ಕೇಂಬ್ಕ್ ಹೋದ್ದ್ ನೀನ್

೨. ಈ ಮಳೀನ್ ನಂಬ್ಕಂಡ್ ಗೆದ್ದಿ ಬ್ಯಾಸಾಯ ಮಾಡ್ತೆ ಅಂದ್ಕಂಡ್ರೆ…ಕಡೀಕ್ ಕತಿ ಹೈಲ್ ಆಪ್ದೇ ಸೈ

೩. ಈ ಮಳಿ ಬಪ್ಪತಿಗೆ ಕುಂದಾಪ್ರ ಸಂತಿಗ್ ಹೋಯ್ ಯಾಪಾರ ಮಾಡ್ಕಂಡ್ ಬಪ್ರೊಳ್ಗೆ ನಮ್ಮ್ ಯಾಪಾರ ಹೈಲ್ ಅಲ್ದೇ. ಒಂದ್ ಗಳ್ಗಿಯಾರೂ ಮಳಿ ಚಡಿ ಕೊಟ್ರ್ ಕಾಣಿ

ಅಂತೂ ರೈಸು-ಪೂರೈಸು ಕತಿ ಬರುದ್ರೊಳ್ಗೆ… ಕಂಪೂಟ್ರ್ ಕುಟ್ಟಿ ಕುಟ್ಟಿ ನಮ್ ಕತಿ ಹೈಲಾಯ್ತ್ ಕಾಣಿ 🙂

ಟಿಪ್ಪಣಿಗಳು
  1. MMaravanthe ಹೇಳುತ್ತಾರೆ:

    ಹೇಂಗೆಂಗೊ ರೈಸ್ ವ್ರ ಇರ್ತ್ರ ಆದ್ರೆ ನಿಮ್ತರ ಬರ್ದ ರೈಸುವವ್ರ ಕಡಿಮಿ ಮರಾಯ್ರೆ.

  2. Raju ಹೇಳುತ್ತಾರೆ:

    Dear sir

    nange kundapura bhase barall adru matadodu shile thumba channagirutte.

    Regards
    Rajupalya

  3. Yogeesha Adiga ಹೇಳುತ್ತಾರೆ:

    ಭಾರಿ ಲಾಯಕ್ ಇತ್ತ್ … ಮಾರಾಯ ಹೀಂಗೆ ಬರಿತ ಬರೀತಾ ಒಂದು ದೊಡ್ಡ ಪುಸ್ತಕ್ವೇ ಬರುತಿಂಗ್ಲು ಬಪ್ಪಂಗೆ ಇತ್ತಲ್ಲೇ ಮಾರಾಯ

  4. Shishir Kannantha ಹೇಳುತ್ತಾರೆ:

    ಹ್ವಾ!!! ನೀನ್ ಹುಡ್ಗ್ಯರ್ ಮುಂದ್ ರೈಸ್ ಬ್ಯಾಡ ಅಕಾ!!!

    ಇದ್ ಅಡ್ಡಿಲ್ಯನಾ?

Leave a reply to RAGHU ಪ್ರತ್ಯುತ್ತರವನ್ನು ರದ್ದುಮಾಡಿ