Archive for ಸೆಪ್ಟೆಂಬರ್ 17, 2008


ಬುದ್ಧಿವಂತ್ರ್ ಜಿಲ್ಲೆ ಅಂದೇಳಿ ಕರ್ಸ್‌ಕಂತಿದ್ದ ಮಂಗ್ಳೂರಿಗೆ ಆದ್ದಾರೂ ಎಂಥದ್? ಇದ್ ಬುದ್ಧಿ ಕಡ್ಮಿ ಆದ್ದಲ್ಲ. ಕಲ್ತದ್ ಹೆಚ್ಚಾಯ್ತ್ ಕಾಲ್ ಮೇಲಾಯ್ತ್ ಅಂಬಂಗೆ ಆಡ್ತ್ರಲಾ ಇವ್ರಿಗೆಲ್ಲ ಎಂಥ ಹೇಳುದ್ ಹೇಳಿ. ಅದೆಂತದೋ ಮತಾಂತರ ಅಂದೇಲಿ ಶುರುವಾದ ಈ ಗಲಾಟಿ ಎಲ್ಲಿಗ್ ಹೋಯ್ ಮುಟ್ಟುತ್ತೋ ಆ ದೇವ್ರೇ ಬಲ್ಲ. ಬೆಂಕಿ ಇಲ್ದೆ ಹೊಗಿ ಏಳುದಿಲ್ಲ. ಫಾರಿನ್ನಿಂದ ದುಡ್ ಬತ್ತಂಬ್ರ್, ದುಡ್ಡಿನ್ ಆಶಿ ತೋರ್ಸಿ ಮರ್ಲ್ ಮಾಡ್ತ್ರಂಬ್ರ್, ಕಾಯ್ಲಿ ಗುಣ ಮಾಡ್ತೆ ಅಂದೇಳಿ ಮಂಡಿ ಹಾಳ್ಮಾಡ್ತ್ರ್ ಅಂಬ್ರ್…ಹೀಂಗೆ ಸುಮಾರ್ ವರ್ಷದಿಂದ್ಲೂ ಗುಸುಗುಸು ಅಂದೇಳಿ ಎಲ್ಲಾ ಮಾತಡ್ಕಂತಿದ್ರ್. ಅದು ಸತ್ಯವೋ ಸುಳ್ಳೋ ಆ ಮಾತ್ ಬದಿಗಿರ್ಲಿ. ಹಾಂಗಂದೇಳಿ ಇವ್ರ್ ಇಗರ್ಜಿ ಮೇಲೆಲ್ಲಾ ಮುರ್ಕಂಡ್ ಬಿದ್ದದ್ ಸಮ್ನಾ? ಎಂತದೇ ಇದ್ರೂ ಅದನ್ನ್ ಕೇಂಬುಕೆ ಒಂದ್ ಕಾನೂನ್, ರೀತಿ-ನೀತಿ ಅಂದೇಳಿ ಇರತ್ತಲ್ದಾ? ಹೀಂಗೆಲ್ಲ ನೆಡಿತಾ ಇತ್ತ್ ಅಂದೇಳಿ ಸರ್ಕಾರದಿಂದ್ಲೇ ತನ್ಕಿ ಮಾಡುಕ್ ಒತ್ತಾಯ ಮಾಡ್ಲಕ್ಕಿದ್ದಿತ್ ಅಲ್ದ. ಒಂದ್ ವೇಳೆ ಹಾಂಗೆಲ್ಲ ನೆಡಿತಿದ್ದದ್ ಹೌದೇ ಅಂತಾರೆ ಅದಕ್ ಸಂಬಂಧಪಟ್ಟರನ್ ಹಿಡ್ದ್ ಜೈಲಿಗೆ ಹಾಕ್ಲಕ್ಕಿದ್ದಿತಲ್ದಾ? ಅದ್ ಬಿಟ್ ಮುಂದ್‌ವರುದ್ ಬ್ಯಾಡ ಇದ್ದಿತಾ ಅಂದೇಳಿ. ಇವ್ರ್ ಇಗರ್ಜಿಗೆ ನುಗ್ರ್, ದಾಳಿ ಮಾಡ್ರ್ ಅಂದೇಳಿ ಅವ್ರ್ ಇವ್ರ್ ಮೇಲ್ ತಿರ್ಗಿ ಬಿದ್ದ್, ಕತ್ತಿ ಚೂರಿಯಗೆಲ್ಲ ಹೊಡ್ಕಂಡ್ ಬಡ್ಕಂಡ್ ಇಷ್ಟೆಲ್ಲಾ ರಗ್ಳಿ ರಾಮಾಯಣ ಆಯ್ತ್ ಕಾಣಿ ಈಗ. ಎಲ್ಲದ್ದಕ್ಕೂ ಹೊಡಿ-ಕಡಿ-ಬಡಿ ಅಂತಾ ಆಯ್ಕಂಡ್ರೆ ನೆಮ್ಮದಿಯಗೆ ಬದ್ಕುಕೆ ಎಡಿತ್ತಾ? ಇವ್ರ್ ನಾಕ್ ಜನಿಗ್ ಹೊಡುದ್, ಇವ್ರ್ ಹೊಡ್ದ್ರ್ ಅಂದೇಳಿ ಅವ್ರ್ ಎಂಟ್ ಜನಿನ ಮೇಲ್ ಕೈ ಮಾಡುದ್.. ಹೀಂಗೆ ಮಾಡ್ತಾ ಹೋದ್ರೆ ಅದಕ್ ತಲಿ ಬುಡ ಇತ್ತಾ ಹೇಳಿ ಕಾಂಬ.

 

ಈ ರಾಜ್ಕಾರಣಿಗಳೆಲ್ಲ ಮಾತಾಡುದ್ ಕೇಂಡ್ರೆ ಮೈಎಲ್ಲಾ ಉರಿ ಬತ್ತ್. ಅವ್ರ್ ಇದ್ರಗೆ ತಮ್ಗೆ ಎಲ್ಲ್ ಪಡಾವ್ ಆತ್ತ್ ಕಾಂಬ ಅಂದೇಳಿ, ಆಚಿ ಬದ್ಯಗೆ ಮಗಿನ್ ತೊಡಿ ಚೂಂಟುದೂ ಅವ್ರೆ, ಈಚಿ ಬದ್ಯಗೆ ತೊಟ್ಲ್ ತೂಗ್ದಾಂಗೆ ನಾಟ್ಕ ಮಾಡುದೂ ಅವ್ರೆ. ಅವ್ರ್ ಬ್ಯಾಳಿ ಬೇಯ್ಸ್‌ಕಂಬುಕೆ ಎಂತ ಬೇಕಾರೂ ಮಾಡ್ತ್ರ್, ಹ್ಯಾಂಗ್ ಬೇಕಾರೂ ನಾಲ್ಗಿ ತಿರ್ಸ್‌ತ್ರ್. ಮೊನ್ನೆ ರಾತ್ರಿ ಎನ್‌ಡಿಟಿವಿ ವಾರ್ತೆಯೊಳ್ಗೆ ಕರ್ನಾಟಕದ್ ರಾಜ್ಕಾರ್ಣಿ ಒಬ್ರ್ ಮಾತಾಡ್ತಿದ್ರ್.. ಅವ್ರ್ ಹೇಳದ್ ಎಂತಾ ಗೊತ್ತಿತ? ಇವ್ರ್ ತಿರ್ಗಿ ಬಿದ್ದದ್ ಸಮ್ನೆ. ಇವ್ರ್ ಕೈಕಟ್ಕಂಡ್ ಕೂಕಣ್ಕ್ ಇದ್ದಿತ್ ಅಂದೇಳಿ ನೀವ್ ಹೇಳುದಾ ಹಂಗಾರೆ ಅಂದೇಳಿ ಪ್ರಶ್ನೆ ಕೇಂಬರಿಗೆ ತಿರ್ಗಿ ಕೇಂತಾ ಇದ್ರ್. ಅಕ್ಲ್ ಇದ್ದರ್ಯಾರಾರೂ ಹೀಂಗ್ ಹೇಳ್ಕಿ ಕೊಡ್ತ್ರಾ? ಇವ್ರ್ ಓಟಿಗೋಸ್ಕರ ಎಂತ ಮಾಡುಕೂ ತಯರಿದ್ರಲಾ ಮರಾಯ್ರೆ. ಇಗರ್ಜಿಗೆ ನುಗ್ಗದ್ ತಪ್ಪೇ… ಹೀಂಗ್ ಮಾಡುಕ್ ಆಗ ಇದ್ದಿತ್. ಅದನ್ನ್ ಯಾರೇ ಮಾಡದ್ದಿದ್ರೂ ತಪ್ಪ್ ತಪ್ಪೇ. ಆರೆ ಹಾಂದೇಳಿ ಇವ್ರ್ ತಿರ್ಗಿ ಹೋಡದ್ ಸಮನೇ ಅಂದೇಳಿ ಹೇಳಿ ಜನ್ರನ್ ಎತ್ತಿ ಕಟ್ಟಿ ಮತ್ತಷ್ಟ್ ಗಲಾಟಿ ಆಪು ಹಾಂಗ್ ಮಾಡ್ತ್ರಲಾ… ಇವ್ರನ್ನೆಲ್ಲಾ ಎಂತ ಮಾಡ್ಕ್ ಹೇಳಿ. ಇಂತ ವಿಷ್ಯದಗೂ ಕೊಳ್ಕಟಿ ರಾಜ್ಕೀಯ ಮಾಡು ಇವ್ರನ್ ಕಂಡ್ರೆ, ಇವ್ರಿಗ್ ಓಟ್ ಹಾಕಿ ಆರ್ಸದ್ದಕ್ಕೆ ನೆಗಾಡ್ಕೋ ಮರ್ಕಕೋ ಗೊತ್ತಾತಿಲ್ಲ.

 

ಅಸ್ಲಿಗೆ ನಮ್ ಅಕ್ಲ್ ನಮ್ ಕೈಲ್ ಇರ್ಕ್. ಯಾವ್ ಧರ್ಮವೇ ಆಯ್ಲಿ, ನಮ್ದ್ ಮೇಲೆ ಬೇರೆಯರದ್ದೆಲ್ಲ ಬುರ್ನಾಸ್ ಅಂತ್ ಹೇಳುದಿಲ್ಲ. ಯಾವ ಧರ್ಮದ ಪುಸ್ತಕದಗೂ ಹಾಂಗಂತೇಳಿ ಇರುದಿಲ್ಲ. ಅವ್ರವ್ರ್ ಮನ್ಸಂಗೆ ಅವ್ರವ್ರ್ ಧರ್ಮ ಜಾತಿ ದೊಡ್ದ್ ಅಂದಿರತ್ತ್. ಇರ್ಲಿ… ಅದು ನಮ್ ಮನ್ಸೊಳ್ಗೇ ಇರ್ಲಿ, ಮನೆಯೊಳ್ಗೆ ಇರ್ಲಿ. ಹೀಂಗೆಲ್ಲ ಹೊರ್ಗ್ ಬಪ್ಪುಕಾಗ. ಇದನ್ನ ಎಲ್ಲರೂ ತಿಳ್ಕಂಡ್ರೆ ಈ ಗೌಜ್-ಗಲಾಟಿ ಪಂಚತ್ಗಿ ಎಲ್ಲಿರ್ತಿತ್ತ್. ಇದೆಲ್ಲಾ ನಾವ್ ನಾವೇ ಮಾಡ್ಕಂಡದ್, ಈಗ ನಾವ್ ನಾವೇ ಅನ್ಭಯಿಸ್ಕ್. ಶಾಂತಿ, ನೆಮ್ಮದಿ, ಒಗ್ಗಟ್ಟು, ಪ್ರೀತಿ ಇದನ್ನೆಲ್ಲಾ ಹೇಳುವ ಬೋಧ್ನಿ ಎಲ್ಲಾ ಪುಕ್ಳಿ ಅಡಿ ಹಾಯ್ಕಂಡ್, ಒಬ್ರ್ ಮೇಲ್ ಒಬ್ರ್ ಹಲ್ಲ್ ಮಸೀತಾ ಕೂಕಂಡ್ರೆ ನಾಳಿಗೆ ಬರೀ ಧರ್ಮ ಮಾತ್ರ ಉಳಿತ್ತ್ !! ಅದನ್ನ್ ಆಚರ್ಣಿ ಮಾಡ್ಕಾದರೆಲ್ಲಾ ಹೀಂಗೆ ಬಡ್ದಾಡ್ಕಂಡ್ ಸತ್ತ್ ಹೋಯಿ ಆಯಿರತ್ತಲೆ!!! ಇಷ್ಟ್ ಸಣ್ಣ್ ವಿಷ್ಯ ಅರ್ಥ ಮಾಡ್ಕಂಬ್ಕೆ ಆಗ್ದಿದ್ರ್ ಮೇಲೆ ಏನ್ ಬುದ್ಧಿವಂತ್ಕಿ ಇದ್ರೆ ಏನ್ ಬಂತ್ ಹೇಳಿ. ನಾಮ್ ಜಿಲ್ಲೆ ಬುದ್ಧಿವಂತ್ರ್ ಜಿಲ್ಲೆ ಅಂದ್ರೆ ಯಾರಾರೂ ನೆಗಾಡುಕಿದ್ರ್ ಅಷ್ಟೇ